ಜಪಾನ್‌ನ ನವೊಮಿ ಒಸಾಕಾ ಮುಡಿಗೆ ಯುಎಸ್ ಓಪನ್ ಪ್ರಶಸ್ತಿ

Update: 2020-09-13 03:36 GMT

ನ್ಯೂಯಾರ್ಕ್ : ಜಪಾನ್‌ನ ನವೊಮಿ ಒಸಾಕಾ ಅವರು ಶನಿವಾರ ಬೈಲೋರಷ್ಯಾದ ವಿಕ್ಟೋರಿಯಾ ಅಝರೆಂಕಾ ಅವರನ್ನು ಮಣಿಸಿ, ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಇದು ಅವರ ವೃತ್ತಿಜೀವನದ ಮೂರನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ. ಇದಕ್ಕೂ ಮುನ್ನ 22ರ ಟೆನಿಸ್ ತಾರೆ 2018ರ ಯುಎಸ್ ಓಪನ್ ಹಾಗೂ 2019ರ ಆಸ್ಟ್ರೇಲಿಯನ್ ಓಪನ್ ಗೆದ್ದುಕೊಂಡಿದ್ದರು.

ಫ್ಲಷಿಂಗ್ ಮೆಡೋಸ್‌ನ ನಿರ್ಜನ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಾಲ್ಕನೇ ಶ್ರೇಯಾಂಕದ ಒಸಾಕಾ, ಶ್ರೇಯಾಂಕ ರಹಿತ ಆಟಗಾರ್ತಿ ಅಝರೆಂಕಾ ಸವಾಲನ್ನು 1 ಗಂಟೆ 53 ನಿಮಿಷಗಳ ಹೋರಾಟದಲ್ಲಿ 1-6, 6-3, 6-3 ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.

ಅನುಭವಿ ಆಟಗಾರ್ತಿ ಅಝರೆಂಕಾ ಆರಂಭದಲ್ಲಿ ಅದ್ಭುತ ಪ್ರದರ್ಶನ ತೋರಿ ಕೇವಲ 26 ನಿಮಿಷಗಳಲ್ಲಿ ಮೊದಲ ಸೆಟ್ ಗೆದ್ದರು. ಎರಡನೇ ಸೆಟ್‌ನಲ್ಲೂ 2-0 ಮುನ್ನಡೆಯಲ್ಲಿದ್ದಾಗ, ಒಸಾಕಾ ಅದ್ಭುತ ಪ್ರತಿಹೋರಾಟ ತೋರಿ ಎದುರಾಳಿಯ ಸರ್ವೀಸನ್ನು ಎರಡು ಬಾರಿ ಮುರಿದು 4-3 ಮುನ್ನಡೆ ಸಾಧಿಸಿದರು. ಬಳಿಕ ಮೂರನೇ ಬಾರಿಗೆ ಎದುರಾಳಿಯ ಸೆಟ್ ಮುರಿದ ಜಪಾನ್ ಬೆಡಗಿ ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಒಯ್ದರು.

ಒಸಾಕಾ ಮೂರನೇ ಸೆಟ್‌ನಲ್ಲೂ ಎದುರಾಳಿಯ ಸರ್ವ್ ಮುರಿದು 3-1 ಮುನ್ನಡೆ ಸಾಧಿಸಿದರು. ಅತ್ಯಂತ ರೋಚಕ ಘಟ್ಟದಲ್ಲಿ ಹಲವು ಅವಕಾಶಗಳನ್ನು ವ್ಯರ್ಥಪಡಿಸಿಕೊಂಡ ಅಝರೆಂಕಾ, ಉದಯೋನ್ಮುಖ ಆಟಗಾರ್ತಿ 4-1 ಮುನ್ನಡೆ ಗಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು.
ಕ್ಲೀವ್‌ಲ್ಯಾಂಡ್‌ನಲ್ಲಿ 2014ರಲ್ಲಿ ಬಿಳಿಯ ಪೊಲೀಸ್ ಅಧಿಕಾರಿಗಳ ಗುಂಡೇಟಿಗೆ ಬಲಿಯಾದ 12 ವರ್ಷದ ಆಫ್ರಿಕನ್-ಅಮೆರಿಕನ್ ಬಾಲಕ ಟಮಿರ್ ರೈಸ್ ಹೆಸರು ಹೊಂದಿದ್ದ ಮಾಸ್ಕ್ ಧರಿಸಿ ಕೋರ್ಟ್‌ಗೆ ಇಳಿದು ಒಸಾಕಾ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News