ವೆನಿಸ್ ಚಲನಚಿತ್ರೋತ್ಸವದಲ್ಲಿ ‘ದಿ ಡಿಸಿಪಲ್’: ಮರಾಠಿ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ

Update: 2020-09-13 15:07 GMT

ಹೊಸದಿಲ್ಲಿ,ಸೆ.13: ‘ದಿ ಡಿಸಿಪಲ್’ ಮರಾಠಿ ಚಿತ್ರಕ್ಕಾಗಿ ನಿರ್ದೇಶಕ ಚೈತನ್ಯ ತಮ್ಹಾಣೆ ಅವರು ಪ್ರತಿಷ್ಠಿತ ವೆನಿಸ್ ಚಲನಚಿತ್ರೋತ್ಸವದ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಚೀನಿ-ಅಮೆರಿಕನ್ ಚಿತ್ರ ನಿರ್ಮಾಪಕಿ ಕ್ಲೋಯಿ ಝಾವೊ ಅವರು ‘ನೋಮಾಡ್‌ಲ್ಯಾಂಡ್; ಚಿತ್ರಕ್ಕಾಗಿ ಅತ್ಯುನ್ನತ ಗೋಲ್ಡನ್ ಲಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಶನಿವಾರ ರಾತ್ರಿ ನಡೆದ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಸ್ಪರ್ಧೆಯ ವಿಜೇತರನ್ನು ಪ್ರಕಟಿಸಲಾಯಿತು.

ಇದರೊಂದಿಗೆ ತಮ್ಹಾಣೆ ಮೀರಾ ನಾಯರ್ ಬಳಿಕ ಐರೋಪ್ಯ ಚಲನಚಿತ್ರೋತ್ಸವವೊಂದರ ಮುಖ್ಯ ವಿಭಾಗದಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ನಿರ್ದೇಶಕ ಎಂಬ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಂಡಿದ್ದಾರೆ. 2001ರ ವೆನಿಸ್ ಚಲನಚಿತ್ರೋತ್ಸವದಲ್ಲಿ ನಾಯರ್ ತನ್ನ ‘ಮಾನ್ಸೂನ್ ವೆಡಿಂಗ್’ ಚಿತ್ರಕ್ಕಾಗಿ ಗೋಲ್ಡನ್ ಲಯನ್ ಪ್ರಶಸ್ತಿಯನ್ನು ಗೆದ್ದಿದ್ದರು.

‘ದಿ ಡಿಸಿಪಲ್ ’ ಭಾರತೀಯ ಶಾಸ್ತ್ರೀಯ ಸಂಗೀತಕಾರನ ಕುರಿತ ಚಿತ್ರವಾಗಿದೆ.

ಕಳೆದ ವಾರ ವೆನಿಸ್‌ನ ಬಿಯಾನಲೆ ಸಾಂಸ್ಕೃತಿಕ ಕೇಂದ್ರದಲ್ಲಿ ‘ದಿ ಡಿಸಿಪಲ್ ’ನ ಪ್ರೀಮಿಯರ್ ಶೋ ಪ್ರದರ್ಶಿತಗೊಂಡಿದ್ದು,ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

‘ದಿ ಡಿಸಿಪಲ್ ’ ಚಿತ್ರಕಥೆ ರಚನೆ ತನ್ನ ಜೀವನದಲ್ಲಿಯ ಅತ್ಯಂತ ಸವಾಲಿನ ಕಾರ್ಯವಾಗಿತ್ತು ಎಂದಿರುವ ತಮ್ಹಾಣೆ,ತನ್ನ ಯಶಸ್ಸನ್ನು ಭಾರತೀಯ ಶಾಸ್ತ್ರೀಯ ಸಂಗೀತದ ನಂಬಲಾಗದ ಲೋಕದ ದ್ವಾರಗಳು ತನಗಾಗಿ ತೆರೆದುಕೊಳ್ಳಲು ನೆರವಾಗಿದ್ದ ಎಲ್ಲ ಸಂಗೀತಕಾರರು,ಸಂಶೋಧಕರು,ಲೇಖಕರು ಮತ್ತು ಇತಿಹಾಸಕಾರರಿಗೆ ಅರ್ಪಿಸಿದ್ದಾರೆ.

ವಿವೇಕ ಗೋಂಬರ್ ಚಿತ್ರದ ನಿರ್ಮಾಪಕರಾಗಿದ್ದು,ಆಸ್ಕರ್ ಪ್ರಶಸ್ತಿ ಪುರಸ್ಕೃತ ಆಲ್ಫಾನ್ಸೋ ಕುಆರನ್ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

  ‘ದಿ ಡಿಸಿಪಲ್ ’ ತಮ್ಹಾಣೆ ನಿರ್ದೇಶನದ ಎರಡನೇ ಚಿತ್ರವಾಗಿದೆ. 2014ರಲ್ಲಿ ತೆರೆ ಕಂಡಿದ್ದ ಅವರ ಮೊದಲ ಚಿತ್ರ ‘ಕೋರ್ಟ್’ ವೆನಿಸ್ ಚಲನಚಿತ್ರೋತ್ಸವದ ಹಾರಿಝಾನ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾಗಿತ್ತು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಚಿತ್ರರಂಗದ ಗಣ್ಯರು ತಮ್ಹಾಣೆ ಸಾಧನೆಗಾಗಿ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News