ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಯುಎಇ, ಬಹರೈನ್ ಮುಂದು: ಫೆಲೆಸ್ತೀನೀಯರ ಪ್ರತಿಭಟನೆ

Update: 2020-09-13 15:22 GMT

ಗಾಝಾ (ಫೆಲೆಸ್ತೀನ್), ಸೆ. 13: ಯುಎಇ ಮತ್ತು ಬಹರೈನ್ ದೇಶಗಳು ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿರುವುದನ್ನು ವಿರೋಧಿಸಿ ಫೆಲೆಸ್ತೀನೀಯರು ಶನಿವಾರ ಗಾಝಾದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಇಸ್ರೇಲ್, ಅಮೆರಿಕ, ಬಹರೈನ್ ಮತ್ತು ಯುಎಇ ನಾಯಕರ ಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಇಸ್ರೇಲ್‌ನೊಂದಿಗಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರುವ ನಿಟ್ಟಿನಲ್ಲಿ ಆ ದೇಶದೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಬಹರೈನ್ ಶುಕ್ರವಾರ ಒಪ್ಪಿಕೊಂಡಿದೆ. ಇಸ್ರೇಲ್‌ನೊಂದಿಗೆ ಇದೇ ರೀತಿಯ ಒಪ್ಪಂದವನ್ನು ಮಾಡಿಕೊಳ್ಳಲು ವಾರಗಳ ಮೊದಲು ಯುಎಇ ಕೂಡ ಒಪ್ಪಿಕೊಂಡಿತ್ತು.

ಗಾಝಾದ ಆಡಳಿತಾರೂಢ ಹಮಾಸ್ ಗುಂಪು ಈ ಪ್ರತಿಭಟನೆಯನ್ನು ಸಂಘಟಿಸಿದೆ.

‘‘ಸಂಬಂಧ ಸಾಮಾನ್ಯೀಕರಣದ ವೈರಸ್‌ನ ವಿರುದ್ಧ ನಾವು ಹೋರಾಡಬೇಕಾಗಿದೆ ಹಾಗೂ ಆ ವೈರಸ್ ಹರಡದಂತೆ ತಡೆಯುವುದಕ್ಕಾಗಿ ಅದು ಹರಡಬಹುದಾದ ಎಲ್ಲ ದಾರಿಗಳನ್ನು ಮುಚ್ಚಬೇಕಾಗಿದೆ’’ ಎಂದು ಗಾಝಾದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಹಮಾಸ್ ಅಧಿಕಾರಿ ಮೆಹರ್ ಅಲ್-ಹೋಲಿ ಹೇಳಿದರು.

ಪ್ರತಿಭಟನಕಾರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಬಹರೈನ್ ದೊರೆ ಹಾಮದ್ ಬಿನ್ ಇಸಾ ಅಲ್ ಖಲೀಫ ಮತ್ತು ಯುಎಇಯ ಅಬುಧಾಬಿ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್-ನಹ್ಯಾನ್ ಅವರ ಚಿತ್ರಗಳನ್ನು ಸುಟ್ಟು ಹಾಕಿದರು.

 ‘ಫೆಲೆಸ್ತೀನೀಯರಿಗೆ ಮಾಡಿದ ವಿಶ್ವಾಸದ್ರೋಹ’

ಇಸ್ರೇಲ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರುವ ಮೂಲಕ ಯುಎಇ ಮತ್ತು ಬಹರೈನ್ ದೇಶಗಳು ಫೆಲೆಸ್ತೀನೀಯರಿಗೆ ವಿಶ್ವಾಸದ್ರೋಹ ಮಾಡಿವೆ ಎಂದು ಫೆಲೆಸ್ತೀನೀಯರು ಭಾವಿಸಿದ್ದಾರೆ.

ಅರಬ್ ದೇಶಗಳು ಇಸ್ರೇಲ್‌ನೊಂದಿಗೆ ಸಾಮಾನ್ಯ ಸಂಬಂಧವನ್ನು ಹೊಂದಬೇಕಾದರೆ, ಇಸ್ರೇಲ್ ತಾನು ಆಕ್ರಮಿಸಿರುವ ಫೆಲೆಸ್ತೀನ್ ಪ್ರದೇಶಗಳಿಂದ ಹಿಂದೆ ಸರಿಯಬೇಕು ಹಾಗೂ ಫೆಲೆಸ್ತೀನನ್ನು ಸಾರ್ವಭೌಮ ದೇಶವಾಗಿ ಸ್ವೀಕರಿಸಬೇಕು ಎಂಬ ದೀರ್ಘಕಾಲೀನ ಸರ್ವ-ಅರಬ್ ದೇಶಗಳ ನಿಲುವು ಈಗ ದುರ್ಬಲಗೊಳ್ಳಬಹುದು ಎಂಬ ಭೀತಿಯನ್ನು ಫೆಲೆಸ್ತೀನೀಯರು ಹೊಂದಿದ್ದಾರೆ.

ಇಸ್ರೇಲ್‌ನ ಅಪರಾಧಗಳಲ್ಲಿ ಇನ್ನು ಬಹರೈನ್ ಕೂಡ ಭಾಗಿ: ಇರಾನ್

ಇಸ್ರೇಲ್ ಜೊತೆಗೆ ಬಹರೈನ್ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿರುವುದಕ್ಕೆ ಇರಾನ್ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದು, ಬಹರೈನ್ ಈ ವಲಯದಲ್ಲಿ ಅಸ್ಥಿರತೆಯನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದೆ.

‘‘ಈ ವಲಯ ಮತ್ತು ಇಸ್ಲಾಮ್ ಜಗತ್ತಿನ ಭದ್ರತೆಗೆ ಇಸ್ರೇಲ್ ನಿರಂತರ ಬೆದರಿಕೆಯಾಗಿದೆ. ಬಹರೈನ್‌ನ ಆಡಳಿತಗಾರರು ಇನ್ನು ಮುಂದೆ ಅದರ ಅಪರಾಧಗಳಲ್ಲಿ ಸಮಭಾಗಿಗಳಾಗಲಿದ್ದಾರೆ’’ ಎಂದು ಇರಾನ್ ಬಣ್ಣಿಸಿದೆ.

ಪ್ರಸ್ತಾಪಿತ ಬಹರೈನ್-ಇಸ್ರೇಲ್ ಶಾಂತಿ ಒಪ್ಪಂದವನ್ನು ಟರ್ಕಿ ಕೂಡ ಖಂಡಿಸಿದೆ. ಇದು ತನ್ನ ಅಕ್ರಮಗಳನ್ನು ಮುಂದುವರಿಸಲು ಹಾಗೂ ಫೆಲೆಸ್ತೀನ್ ಭೂಭಾಗಗಳನ್ನು ಶಾಶ್ವತವಾಗಿ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಇಸ್ರೇಲ್‌ಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News