ಜಿಡಿಪಿ ಕುಸಿತ, ಗಡಿಬಿಕ್ಕಟ್ಟು, ವಲಸೆ ಕಾರ್ಮಿಕರ ಸಮಸ್ಯೆ ಸದನದಲ್ಲಿ ಚರ್ಚೆ ಸಾಧ್ಯತೆ

Update: 2020-09-13 18:02 GMT

ಹೊಸದಿಲ್ಲಿ,ಸೆ.12: ಭಾರತ-ಚೀನಾ ಗಡಿ ಉದ್ವಿಗ್ನತೆ, ಪಾತಾಳಕ್ಕಿಳಿದ ಜಿಡಿಪಿ, ಲಾಕ್‌ಡೌನ್, ಕೊರೋನ ಹಾವಳಿ ಹಿನ್ನೆಲೆಯಲ್ಲಿ ಕುಸಿದ ಆರ್ಥಿಕತೆ ಹಾಗೂ ವಲಸೆ ಕಾರ್ಮಿಕರ ಬಿಕ್ಕಟ್ಟು ಇವು ಸೋಮವಾರ ಆರಂಭವಾಗಲಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ ರವಿವಾರ ನಡೆದ ಸಂಸದೀಯ ವ್ಯವಹಾರಗಳ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಅಧಿವೇಶನದ ಕಾರ್ಯಸೂಚಿಯನ್ನು ನಿರ್ಧರಿಸಲಾಯಿತು.

  ಸರಕಾರವು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಅಧ್ಯಾದೇಶವೊಂದನ್ನು ಹೊರಡಿಸುವ ಮೂಲಕ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಪಿಎಲ್‌ಎಡಿ) ನಿಧಿಯನ್ನು ಕಡಿತಗೊಳಿಸಿರುವ ಬಗ್ಗೆಯೂ ಕೆಲವು ಸಂಸದರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

 ಕೋವಿಡ್-19 ನಿಯಮಾವಳಿಗಳ ಹಿನ್ನೆಲೆಯಲ್ಲಿ ಪ್ರಶ್ನೋತ್ತರ ಕಲಾಪವನ್ನು ರದ್ದುಪಡಿಸಿರುವುದನ್ನೂ ಸಭೆಯಲ್ಲಿ ಕೆಲವು ವಿಪಕ್ಷ ಸದಸ್ಯರು ತೀವ್ರವಾಗಿ ವಿರೋಧಿಸಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆಯೆಂದು ಬಣ್ಣಿಸಿದರು.

    ಸಭೆಯಲ್ಲಿ ಮಾತನಾಡಿದ ಸಂಸದ ಅಸದುದ್ದೀನ್ ಉವೈಸಿ ಅವರು ಭಾರತ-ಚೀನಾ ಗಡಿ ಉದ್ವಿಗ್ನತೆ ಬಗ್ಗೆ ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಗಡಿಯಲ್ಲಿ ಏನು ನಡೆಯುತ್ತಿದೆಯೆಂಬುದು ಸಂಸತ್‌ಗೆ ತಿಳಿಯಬೇಕಾಗಿದೆ ಎಂದರು. ಇದೊಂದು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವುದರಿಂದ ಗಡಿ ಉದ್ವಿಗ್ನತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಸದರಿಗಷ್ಟೇ ಮಾಹಿತಿ ನೀಡಬೇಕು ಹಾಗೂ ಮಾಧ್ಮಮಗಳನ್ನು ದೂರವಿರಿಸಬೇಕೆಂದು ಅವರು ಸಲಹೆ ನೀಡಿದರು. ಮಂಗಳವಾರ ಮತ್ತೆ ನಡೆಯಲಿರುವ ಬಿಎಸಿ ಸಭೆಯಲ್ಲಿ ಈ ವಿಚಾರವಾಗಿ ಸಮಾಲೋಚನೆ ನಡೆಸಲಾಗುವುದೆಂದು ಸರಕಾರ ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

  ಸಂಸದೀಯ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ, ಅರ್ಜುನ್ ರಾಮ್ ಮೇಘವಾಲ್ ಹಾಗೂ ವಿ. ಮುರಳೀಧರನ್ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ನಿಂದ ಅಧೀರ್ ರಂಜನ್ ಚೌಧುರಿ ಹಾಗೂ ಕೆ.ಸುರೇಶ್, ಬಿಜೆಪಿಯ ಮುಖ್ಯ ಸಚೇತಕ ರಾಕೇಶ್ ಸಿಂಗ್, ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ, ಬಿಜೆಡಿ ನಾಯಕ ಪಿನಾಕಿ ಮಿಶ್ರಾ, ಎಐಎಂಐಎನ ಅಸಾದುದ್ದೀನ್ ಉವೈಸಿ ಮತ್ತತರರು ಭಾಗವಹಿಸಿದ್ದರು.

ಸಭೆಯ ಆನಂತರ ಸುದ್ದಿಗಾರರ ಜೊತೆ ಮಾತನಾಡಿದ ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರು, ಸಂಸತ್ ಕಲಾಪಗಳ ನಿರ್ವಹಣೆಯಲ್ಲಿ ಸಂಪೂರ್ಣ ಸಹಕಾರವನ್ನು ನೀಡಲು ಎಲ್ಲಾ ಪಕ್ಷಗಳು ಒಪ್ಪಿಕೊಂಡಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News