ಸಂಸತ್ತಿನಲ್ಲಿ ನಡೆದ ಕೋವಿಡ್ ಪರೀಕ್ಷೆಯಲ್ಲಿ 17 ಸಂಸದರಿಗೆ ಕೊರೋನ ಪಾಸಿಟಿವ್

Update: 2020-09-14 14:38 GMT

 ಹೊಸದಿಲ್ಲಿ,ಸೆ.14: ಇಂದು ಆರಂಭಗೊಂಡ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ನಡೆಸಲಾದ ಕಡ್ಡಾಯ ಪರೀಕ್ಷೆಗಳಲ್ಲಿ 17 ಲೋಕಸಭಾ ಸದಸ್ಯರು ಕೊರೋನ ವೈರಸ್‌ಗೆ ಪಾಸಿಟಿವ್ ಆಗಿದ್ದಾರೆ. ಸೋಂಕಿತರ ಪೈಕಿ ಬಿಜೆಪಿ ಸಂಸದರು ಗರಿಷ್ಠ ಸಂಖ್ಯೆ (12)ಯಲ್ಲಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್‌ನ ಇಬ್ಬರು, ಶಿವಸೇನೆ, ಡಿಎಂಕೆ ಮತ್ತು ಆರ್‌ಎಲ್‌ಪಿಯ ತಲಾ ಓರ್ವ ಸಂಸದರಲ್ಲಿ ಸೋಂಕು ಕಂಡುಬಂದಿದೆ.

ಒಟ್ಟು 785 ಸಂಸದರ ಪೈಕಿ ಸುಮಾರು 200 ಜನರು 65 ವರ್ಷಕ್ಕೂ ಹೆಚ್ಚಿನ ವಯೋಮಾನದವರಾಗಿದ್ದು, ಕೊರೋನ ವೈರಸ್ ಸೋಂಕಿಗೆ ಸುಲಭವಾಗಿ ಗುರಿಯಾಗುವ ವರ್ಗದಲ್ಲಿದ್ದಾರೆ.

ಈ ಮೊದಲು ಕನಿಷ್ಠ ಏಳು ಕೇಂದ್ರ ಸಚಿವರು ಮತ್ತು ಸುಮಾರು 25 ಸಂಸದರು ಹಾಗೂ ಶಾಸಕರು ಕೋವಿಡ್ ಸೋಂಕಿಗೆ ಗುರಿಯಾಗಿದ್ದರು. ಈ ಪೈಕಿ ಗೃಹಸಚಿವ ಅಮಿತ್ ಶಾ ಅವರು ಸಂಸತ್ ಅಧಿವೇಶನದ ಆರಂಭಕ್ಕೆ ಮುನ್ನ ಸಂಪೂರ್ಣ ಆರೋಗ್ಯ ತಪಾಸಣೆಗಾಗಿ ದಿಲ್ಲಿಯ ಏಮ್ಸ್‌ಗೆ ದಾಖಲಾಗಿದ್ದರು. ಓರ್ವ ಸಂಸದ ಮತ್ತು ಹಲವಾರು ಶಾಸಕರು ಕೊರೋನ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.

ಕಟ್ಟುನಿಟ್ಟಿನ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಸಂಸತ್ ಅಧಿವೇಶನವನ್ನು ನಡೆಸಲಾಗುತ್ತಿದೆ. ಸದಸ್ಯರ ಹಾಜರಾತಿಯನ್ನು ದಾಖಲಿಸಲು ಮೊಬೈಲ್ ಆ್ಯಪ್‌ವೊಂದನ್ನು ಪರಿಚಯಿಸಲಾಗಿದೆ. ಸದನದಲ್ಲಿ ಸಂಸದರ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲಾಗಿದ್ದು,ಆಸನಗಳನ್ನು ಪಾಲಿ ಕಾರ್ಬನ್ ಶೀಟ್‌ಗಳನ್ನು ಅಳವಡಿಸುವ ಮೂಲಕ ಪ್ರತ್ಯೇಕಿಸಲಾಗಿದೆ.

ಅಧಿವೇಶನಕ್ಕೆ ಮುನ್ನ ಕೋವಿಡ್-19 ತಪಾಸಣೆ ಮಾಡಿಸಿಕೊಳ್ಳುವಂತೆ ಎಲ್ಲ ಸಂಸದರನ್ನು ಕೋರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News