ಪ್ರಧಾನಿ ಮೋದಿ, ರಾಷ್ಟ್ರಪತಿ ಸಹಿತ ಭಾರತದ 10,000 ಪ್ರಮುಖರ ಮೇಲೆ ನಿಗಾ ಇಟ್ಟಿರುವ ಚೀನಾ ಸಂಸ್ಥೆ: ವರದಿ

Update: 2020-09-14 10:11 GMT

ಹೊಸದಿಲ್ಲಿ : ಚೀನಾ ಸರಕಾರ ಮತ್ತು ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಜತೆ ನಂಟು ಹೊಂದಿರುವ ಶೆನ್ಝೆನ್ ಮೂಲದ ಝೆನ್ಹುವಾ ಡಾಟಾ ಇನ್ಫಾರ್ಮೇಶನ್ ಟೆಕ್ನಾಲಜಿ ಎಂಬ ಸಂಸ್ಥೆ ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ, ಸರಕಾರಿ ಅಧಿಕಾರಿಗಳು ಪ್ರಮುಖ ರಾಜಕಾರಣಿಗಳು ಹಾಗೂ ಕೈಗಾರಿಕೋದ್ಯಮಿಗಳು ಸೇರಿದಂತೆ 10,000ಕ್ಕೂ ಅಧಿಕ ಭಾರತೀಯರ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿ ಅವರ ಮೇಲೆ ನಿಗಾ ಇಟ್ಟಿದೆ ಎಂದು indianexpress.com ವರದಿ ಮಾಡಿದೆ.

‘ಡಾಟಾವನ್ನು ಹೈಬ್ರಿಡ್ ಯುದ್ಧಕ್ಕೆ’ ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಎಂದು ತನ್ನನ್ನು ಪರಿಚಯಿಸುವ ಝೆನ್ಹುವಾ ಟೆಕ್ನಾಲಜಿ ಸಂಸ್ಥೆ ‘ವಿದೇಶಿ ಟಾರ್ಗೆಟ್’ಗಳ ದೊಡ್ಡ ಮಾಹಿತಿಯನ್ನು,  ಸಾಮಾಜಿಕ ಜಾಲತಾಣಗಳು ಹಾಗೂ ಅಂತರ್ಜಾಲದಲ್ಲಿ ಲಭ್ಯ ವಿವರಗಳನ್ನು ಸಂಗ್ರಹಿಸಿ  ಕ್ರೋಢೀಕರಿಸಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಮುಖ್ಯವಾಗಿ ಪ್ರಧಾನಿ ಹೊರತಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಕನಿಷ್ಠ 60 ಹಿರಿಯ ಹಾಗೂ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ಈ ಸಂಸ್ಥೆ ಗುರಿ ಮಾಡಿದೆ ಎಂದು ವರದಿ ತಿಳಿಸಿದೆ.

ಈ ಪಟ್ಟಿಯಲ್ಲಿ ಕನಿಷ್ಠ 1,350 ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳಿದ್ದಾರೆ. ಜತೆಗೆ  ಉನ್ನತ ವಿಜ್ಞಾನಿಗಳು ಹಾಗೂ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆಯೂ ಸಂಸ್ಥೆ ಕಣ್ಣಿಟ್ಟಿದೆ. ಕೈಗಾರಿಕೋದ್ಯಮಿಗಳಾದ ರತನ್ ಟಾಟಾ, ಗೌತಮ್ ಅದಾನಿ, ಪತ್ರಕರ್ತರು, ಕ್ರೀಡಾಳುಗಳು, ಹೋರಾಟಗಾರರು ಹಾಗೂ ವಿವಿಧ ಪ್ರಕರಣಗಳ ಆರೋಪಿಗಳ ಮಾಹಿತಿಗಳನ್ನೂ ಅದು ಸಂಗ್ರಹಿಸಿದೆ ಎಂದು indianexpress.com ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News