ಸುದರ್ಶನ್ ಟಿವಿಯ ‘ಯುಪಿಎಸ್ ಸಿ ಜಿಹಾದ್’ ಕಾರ್ಯಕ್ರಮದಲ್ಲಿ ಸುಳ್ಳುಗಳ ಸರಮಾಲೆ

Update: 2020-09-14 12:15 GMT

ಹೊಸದಿಲ್ಲಿ,ಸೆ.14: ಸುದರ್ಶನ್ ಟಿವಿಯ ಮುಖ್ಯಸ್ಥ ಸುರೇಶ ಚವಾಣಕೆ ಶುಕ್ರವಾರ ರಾತ್ರಿ ತನ್ನ ವಾಹಿನಿಯಲ್ಲಿ ಪ್ರಸಾರಿಸಿದ್ದ ನಾಗರಿಕ ಸೇವೆಗಳಲ್ಲಿ ಮುಸ್ಲಿಮರ ನುಸುಳುವಿಕೆಯ ಷಡ್ಯಂತ್ರವನ್ನು ಬಯಲಿಗೆಳೆಯುವುದಾಗಿ ಹೇಳಿಕೊಂಡಿದ್ದ ‘ಯುಪಿಎಸ್‌ಸಿ’ ಜಿಹಾದ್ ಪರ್ ಅಬ್ ತಕ್ ಕಾ ಸಬ್‌ಸೆ ಬಡಾ ಖುಲಾಸಾ ’ಕಾರ್ಯಕ್ರಮದಲ್ಲಿ ಹಲವಾರು ಸುಳ್ಳುಗಳಿದ್ದನ್ನು ಸುದ್ದಿ ಜಾಲತಾಣ thequint.com ಬಹಿರಂಗಗೊಳಿಸಿದೆ.

ಹೇಗೆ ಮುಸ್ಲಿಮ್ ಸಮುದಾಯಕ್ಕೆ ಅನುಕೂಲವಾಗುವಂತೆ ನಾಗರಿಕ ಸೇವಾ ಪರೀಕ್ಷೆಗಳನ್ನು ರೂಪಿಸಲಾಗಿದೆ ಮತ್ತು ನಡೆಸಲಾಗುತ್ತಿದೆ ಎಂಬ ಬಗ್ಗೆ ಚವಾಣಕೆ ತನ್ನ ಒಂದು ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.

ಚವಾಣಕೆ ಕಾರ್ಯಕ್ರಮದ ಬುನಾದಿಯೇ ಸರಿಯಿರಲಿಲ್ಲ. ಕೇಂದ್ರ ಲೋಕಸೇವಾ ಆಯೋಗವು ಧರ್ಮದ ಆಧಾರದಲ್ಲಿ ತನ್ನ ಫಲಿತಾಂಶಗಳನ್ನು ಅಥವಾ ಯಾವುದೇ ಅಧಿಸೂಚನೆಯನ್ನು ಬಿಡುಗಡೆಗೊಳಿಸುವುದಿಲ್ಲ, ಬದಲಿಗೆ ಸಾಮಾನ್ಯ ವರ್ಗ, ಒಬಿಸಿ, ಎಸ್‌ಸಿ, ಎಸ್‌ಟಿ ಹೀಗೆ ವಿವಿಧ ಮೀಸಲು ಸಮುದಾಯಗಳ ಆಧಾರದಲ್ಲಿ ವಿಭಜಿಸಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತದೆ ಎನ್ನುವುದು ತಪ್ಪು.

ಯುಪಿಎಸ್‌ಸಿ ಪರೀಕ್ಷೆಗಳಿಗೆ ಹಾಜರಾಗುವ ಮುಸ್ಲಿಮ್ ಅಭ್ಯರ್ಥಿಗಳು ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ಪಡೆಯುತ್ತಿದ್ದಾರೆ ಎಂದು ಚವಾಣಕೆ ಹೇಳಿದ್ದಾರೆ. ಸತ್ಯವೇನೆಂದರೆ ಯುಪಿಎಸ್‌ಸಿಯ 2020ರ ಅಧಿಸೂಚನೆಯಂತೆ ಒಬಿಸಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ಇದು ಇತರ ಹಿಂದುಳಿದ ವರ್ಗಗಳ ಎಲ್ಲ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ, ಮುಸ್ಲಿಮರಿಗೆ ಮಾತ್ರವಲ್ಲ.

  ಒಬಿಸಿ ವಿಭಾಗದ ಅಭ್ಯರ್ಥಿಗಳು ಒಂಭತ್ತು ಸಲ ಪರೀಕ್ಷೆಗೆ ಹಾಜರಾಗಿ ತೇರ್ಗಡೆಗೆ ಪ್ರಯತ್ನಿಸಬಹುದು ಮತ್ತು ಮುಸ್ಲಿಮರು ಒಬಿಸಿ ವಿಭಾಗದಲ್ಲಿ ನುಸುಳುವ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗರಿಷ್ಠ ಆರು ಸಲ ಮಾತ್ರ ಪ್ರಯತ್ನಿಸಬಹುದು ಎಂದು ಚವಾಣಕೆ ಹೇಳಿದ್ದಾರೆ. ಯುಪಿಎಸ್‌ಸಿಯ ಅಧಿಸೂಚನೆಯಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಆರು ಸಲ ಮತ್ತು ಒಬಿಸಿಗಳಿಗೆ ಒಂಭತ್ತು ಸಲ ಪ್ರಯತ್ನಿಸುವ ಅವಕಾಶವಿದೆ ನಿಜ. ಆದರೆ ಒಂಭತ್ತು ಸಲ ಪ್ರಯತ್ನಿಸಲು ಅವಕಾಶವಿರುವ ಕೆಲವು ವರ್ಗಗಳಿರುವಾಗ ಇದನ್ನು ಧರ್ಮದೊಂದಿಗೆ ಸುಳ್ಳಾಗಿ ತಳುಕು ಹಾಕುವ ಪ್ರಯತ್ನವನ್ನು ಚವಾಣಕೆ ಮಾಡಿದ್ದಾರೆ.

  ಚವಾಣಕೆ ತನ್ನ ಕಾರ್ಯಕ್ರಮದಲ್ಲಿ ಅಣಕು ಸಂದರ್ಶನವೊಂದನ್ನು ತೋರಿಸಿದ್ದಾರೆ ಮತ್ತು ಸಂದರ್ಶಕ ಮುಸ್ಲಿಮ್ ಅಭ್ಯರ್ಥಿಗೆ 'ನಿಮ್ಮ ಸಂದರ್ಶನ ಸಾಮಾನ್ಯ ಸಂದರ್ಶನವಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ನಿಮ್ಮ ವಯಸ್ಸು ಒಂದು ಕಾರಣವಾದರೆ, ನಿಮ್ಮ ಸಮುದಾಯ ಇನ್ನೊಂದು ಕಾರಣವಾಗಿದೆ’ಎಂದು ಹೇಳುವುದನ್ನು ಜನರಿಗೆ ಕೇಳಿಸಿದ್ದಾರೆ ಮತ್ತು ಮುಸ್ಲಿಮರಿಗೆ ಏಕೆ ವಿಶೇಷ ಸಂದರ್ಶನ ಎಂದು ಪಶ್ನಿಸಿದ್ದಾರೆ. ನಿಜವಾದ ಸಂದರ್ಶನಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ದೃಷ್ಟಿ ಐಎಎಸ್ ಅಕಾಡೆಮಿ ನಡೆಸಿದ್ದ ಅಣಕು ಸಂದರ್ಶನವನ್ನು ಚವಾಣಕೆ ಆಯ್ದುಕೊಂಡಿದ್ದರು. “ಅತಿ ಕಡಿಮೆ ಮುಸ್ಲಿಮ್ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುತ್ತಾರೆ. ಸಂದರ್ಶನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ನಾವು ಪ್ರತಿಯೊಬ್ಬರಿಗೂ ಹೇಳುತ್ತೇವೆ. ನೀವು ಮಂಡಳಿಯ ಸದಸ್ಯರಿಂದ ಕೆಲವು ಪೂರ್ವಗ್ರಹಗಳನ್ನೂ ಎದುರಿಸಬೇಕಾಗಬಹುದು. ನಿಮ್ಮ ವಯಸ್ಸು ಮತ್ತು ಸಮುದಾಯ ಈ ಪೂರ್ವಗ್ರಹಗಳಾಗಬಹುದು” ಎಂದು ಸಂದರ್ಶಕ ಹೇಳುವ ದೃಶ್ಯವನ್ನು ಚವಾಣಕೆ ತೋರಿಸಿಯೇ ಇಲ್ಲ.

ಮುಸ್ಲಿಮರಿಗೆ ಅನುಕೂಲವಾಗಲು ಮುಸ್ಲಿಮ್ ವಿವಿಗಳಲ್ಲಿ ಕೋಚಿಂಗ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಚವಾಣಕೆ ಆರೋಪಿಸಿದ್ದಾರೆ. ನಿಜವೇನೆಂದರೆ ಈ ಸೆಂಟರ್‌ಗಳು ಮುಸ್ಲಿಮ್ ಅಭ್ಯರ್ಥಿಗಳಿಗೆ ಮಾತ್ರ ಮೀಸಲಲ್ಲ, ಅಲ್ಪಸಂಖ್ಯಾತರೊಂದಿಗೆ ಎಸ್‌ಸಿ-ಎಸ್‌ಟಿಗಳು ಮತ್ತು ಎಲ್ಲ ಸಮುದಾಯಗಳ ಮಹಿಳಾ ಅಭ್ಯರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ನಿಡಲಾಗುತ್ತದೆ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾವಂತೂ ಜಾತಿ-ಧರ್ಮಗಳ ಭೇದವಿಲ್ಲದೆ ಎಲ್ಲರಿಗೂ ಉಚಿತ ತರಬೇತಿಯನ್ನು ಒದಗಿಸುತ್ತಿದೆ ಎಂದು thequint.com ಬೆಟ್ಟು ಮಾಡಿದೆ.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News