ಫ್ರಾನ್ಸ್, ಸ್ವೀಡನ್ ಲ್ಯಾಬ್‌ಗಳ ಪರೀಕ್ಷೆಯಲ್ಲೂ ಖಚಿತ: ಜರ್ಮನಿ

Update: 2020-09-14 17:30 GMT

ಬರ್ಲಿನ್ (ಜರ್ಮನಿ), ಸೆ. 14: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ಮೇಲೆ ನೊವಿಚೊಕ್ ನರ್ವ್ ಏಜಂಟ್ ಎಂಬ ಮಾರಕ ರಾಸಾಯನಿಕ ಪ್ರಯೋಗವಾಗಿರುವುದನ್ನು ಫ್ರಾನ್ಸ್ ಮತ್ತು ಸ್ವೀಡನ್‌ ನ ಪ್ರಯೋಗಾಲಯಗಳೂ ಕಂಡುಕೊಂಡಿವೆ ಎಂದು ಜರ್ಮನಿಯ ಸರಕಾರ ಸೋಮವಾರ ಹೇಳಿದೆ.

 ನೊವಿಚೊಕ್ ರಾಸಾಯನಿಕ ಪ್ರಾಶನವಾಗಿರುವುದಾಗಿ ಜರ್ಮನಿ ಕಂಡುಕೊಂಡಿರುವ ಪುರಾವೆಯನ್ನು, ನವಾಲ್ನಿ ದೇಹದಿಂದ ಪ್ರತ್ಯೇಕ ಮಾದರಿಗಳನ್ನು ಪಡೆದುಕೊಂಡು ಸ್ವತಂತ್ರವಾಗಿ ಪರಿಶೀಲಿಸುವಂತೆ ಜರ್ಮನಿಯು ಸ್ವೀಡನ್ ಮತ್ತು ಫ್ರಾನ್ಸ್ ದೇಶಗಳನ್ನು ಕೋರಿತ್ತು ಎಂದು ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್‌ರ ವಕ್ತಾರ ಸ್ಟೀಫನ್ ಸೈಬರ್ಟ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ನವಾಲ್ನಿ ಈಗ ಬರ್ಲಿನ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ‘‘ಫ್ರಾನ್ಸ್ ಮತ್ತು ಸ್ವೀಡನ್‌ನ ವಿಶಿಷ್ಟ ಪ್ರಯೋಗಾಲಯಗಳಲ್ಲಿ ನಡೆಸಲಾದ ಪರಿಶೀಲನೆಯ ಫಲಿತಾಂಶಗಳು ಈಗ ಲಭ್ಯವಿವೆ. ಆ ಫಲಿತಾಂಶಗಳು ಜರ್ಮನಿಯ ಪ್ರಯೋಗಾಲಯದಲ್ಲಿ ಸಾಬೀತಾಗಿರುವ ವಿಷಯವನ್ನು ಖಚಿತಪಡಿಸಿವೆ’’ ಎಂದು ಸೈಬರ್ಟ್ ತಿಳಿಸಿದರು.

ಜಾಗತಿಕ ರಾಸಾಯನಿಕ ಅಸ್ತ್ರಗಳ ಮೇಲಿನ ನಿಗಾ ಸಂಸ್ಥೆ ಒಪಿಸಿಡಬ್ಲು ಕೂಡ ನವಾಲ್ನಿಯ ಮಾದರಿಗಳ ಸ್ವತಂತ್ರ ವಿಶ್ಲೇಷಣೆ ನಡೆಸಿದ್ದು, ಅದರ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News