ಉಯಿಘರ್‌ನ ‘ಬಲವಂತದ ದುಡಿಮೆ’ಯ ಚೀನೀ ವಸ್ತುಗಳಿಗೆ ಅಮೆರಿಕ ನಿಷೇಧ

Update: 2020-09-15 15:16 GMT

ವಾಶಿಂಗ್ಟನ್, ಸೆ. 15: ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿ ‘ಬಲವಂತದ ದುಡಿಮೆ’ಯ ಮೂಲಕ ಉತ್ಪಾದಿಸಲಾದ ಚೀನೀ ವಸ್ತುಗಳನ್ನು ನಿಷೇಧಿಸುವುದಾಗಿ ಅಮೆರಿಕ ಸೋಮವಾರ ಹೇಳಿದೆ. ನಿಷೇಧಿತ ವಸ್ತುಗಳಲ್ಲಿ ಕ್ಸಿನ್‌ಜಿಯಾಂಗ್‌ನ ‘ಉದ್ಯೋಗ ತರಬೇತಿ ಕೇಂದ್ರ’ವೊಂದರಲ್ಲಿ ಉತ್ಪಾದನೆಯಾದ ವಸ್ತುಗಳೂ ಸೇರಿವೆ.

 ಈ ‘ಉದ್ಯೋಗ ತರಬೇತಿ ಕೇಂದ್ರ’ವು ಉಯಿಘರ್ ಮುಸ್ಲಿಮ್ ಅಲ್ಪಸಂಖ್ಯಾತರ ‘ಯಾತನಾ ಶಿಬಿರ’ವಾಗಿದೆ ಎಂಬುದಾಗಿ ಅಮೆರಿಕ ಬಣ್ಣಿಸಿದೆ.

‘‘ಉಯಿಘರ್ ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ವ್ಯವಸ್ಥಿತ ದಮನ ಕಾರ್ಯದಲ್ಲಿ ಚೀನಾ ಸರಕಾರ ತೊಡಗಿದೆ’’ ಎಂದು ಸುಂಕ ಮತ್ತು ಗಡಿ ರಕ್ಷಣಾ ಸಂಸ್ಥೆಯ ಉಸ್ತುವಾರಿ ಕಮಿಶನರ್ ಮಾರ್ಕ್ ಮೋರ್ಗನ್ ಹೇಳಿದರು.

‘‘ಬಲವಂತದ ಕಾಮಗಾರಿಯು ಮಾನವಹಕ್ಕುಗಳ ತೀವ್ರ ಉಲ್ಲಂಘನೆಯಾಗಿದೆ’’ ಎಂದು ಅವರು ನುಡಿದರು.

ನಿಷೇಧಿತ ವಸ್ತುಗಳಲ್ಲಿ ಕ್ಸಿನ್‌ಜಿಯಾಂಗ್ ಮತ್ತು ಅದರ ಪಕ್ಕದ ಅನ್‌ಹುಯಿಯಲ್ಲಿರುವ ಐದು ನಿರ್ದಿಷ್ಟ ಕಂಪೆನಿಗಳು ಉತ್ಪಾದಿಸುತ್ತಿರುವ ಹತ್ತಿ, ಉಡುಪುಗಳು, ಕೂದಲು ಉತ್ಪನ್ನಗಳು ಮತ್ತು ಇಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿವೆ.

ಕ್ಸಿನ್‌ಜಿಯಾಂಗ್‌ನಲ್ಲಿರುವ ಲಾಪ್ ಕೌಂಟಿ ನಂಬರ್ 4 ವೊಕೇಶನಲ್ ಸ್ಕಿಲ್ಸ್ ಎಜುಕೇಶನ್ ಆ್ಯಂಡ್ ಟ್ರೇನಿಂಗ್ ಸೆಂಟರ್‌ನಲ್ಲಿ ತಯಾರಾಗಿರುವ ಉತ್ಪನ್ನಗಳೂ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿವೆ.

ಈ ಕೇಂದ್ರವು ಬಲವಂತದ ದುಡಿಮೆಯ ಕೇಂದ್ರವಾಗಿದೆ ಎಂಬುದಾಗಿ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ಉಸ್ತುವಾರಿ ಉಪ ಕಾರ್ಯದರ್ಶಿ ಕೆನ್ ಕಕ್ಸಿನೆಲಿ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News