ಯಾವುದೇ ಇರಾನ್ ದಾಳಿಗೆ ಸಾವಿರ ಪಟ್ಟು ಹೆಚ್ಚಿನ ತೀವ್ರತೆಯಿಂದ ಪ್ರತಿದಾಳಿ: ಡೊನಾಲ್ಡ್ ಟ್ರಂಪ್

Update: 2020-09-15 15:38 GMT

ವಾಶಿಂಗ್ಟನ್, ಸೆ. 15: ಇರಾನ್ ನಡೆಸುವ ಯಾವುದೇ ದಾಳಿಗೆ ಅದಕ್ಕಿಂತ 1,000 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕ್ರಿಯಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ಅಮೆರಿಕದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ತನ್ನ ಸೇನಾಧಿಕಾರಿ ಜನರಲ್ ಕಾಸಿಮ್ ಸುಲೈಮಾನಿ ಸಾವಿಗೆ ಪ್ರತೀಕಾರ ಸಲ್ಲಿಸಲು ಇರಾನ್ ಯೋಜನೆ ರೂಪಿಸಿದೆ ಎಂಬ ವರದಿಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೂ ಮೊದಲು ದಕ್ಷಿಣ ಆಫ್ರಿಕಕ್ಕೆ ಅಮೆರಿಕದ ರಾಯಭಾರಿಯನ್ನು ಹತ್ಯೆಗೈಯಲು ಇರಾನ್ ಸಂಚು ರೂಪಿಸಿದೆ ಎಂಬುದಾಗಿ ಅಮೆರಿಕದ ಮಾಧ್ಯಮವೊಂದು ಅನಾಮಧೇಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

‘‘ಭಯೋತ್ಪಾದಕರ ನಾಯಕ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕವನ್ನು ಗುರಿಯಾಗಿಸಿ ಒಂದು ಹತ್ಯೆಯನ್ನು ಮಾಡಲು ಅಥವ ಇತರ ದಾಳಿಯನ್ನು ನಡೆಸಲು ಇರಾನ್ ಯೋಜನೆಯೊಂದನ್ನು ರೂಪಿಸಿರುವ ಸಾಧ್ಯತೆಯಿದೆ ಎಂದು ಪತ್ರಿಕಾ ವರದಿಗಳು ಹೇಳಿವೆ’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

 ‘‘ಅಮೆರಿಕದ ವಿರುದ್ಧ ಇರಾನ್ ಮಾಡುವ ಯಾವುದೇ ರೂಪದ ಯಾವುದೇ ದಾಳಿಗೆ ಪ್ರತೀಕಾರವಾಗಿ ಅದಕ್ಕಿಂತ 1,000 ಪಟ್ಟು ಹೆಚ್ಚಿನ ತೀವ್ರತೆಯೊಂದಿಗೆ ಇರಾನ್ ವಿರುದ್ಧ ದಾಳಿ ನಡೆಸಲಾಗುವುದು’’ ಎಂದು ತನ್ನ ಟ್ವೀಟ್‌ನಲ್ಲಿ ಟ್ರಂಪ್ ಹೇಳಿದ್ದಾರೆ.

ಜನವರಿಯಲ್ಲಿ ಬಗ್ದಾದ್ ವಿಮಾನ ನಿಲ್ದಾಣದ ಸಮೀಪ ಅಮೆರಿಕ ಸೇನೆಯು ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್‌ನ ಉನ್ನತ ಕಮಾಂಡರ್ ಸುಲೈಮಾನಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News