ದಿಲ್ಲಿ ಗಲಭೆ: ದಿಲ್ಲಿ ವಿಧಾನ ಸಭೆಯ ‘ಶಾಂತಿ ಮತ್ತು ಸೌಹಾರ್ದ’ ಸಮಿತಿ ಮುಂದೆ ಹಾಜರಾಗದ ಫೇಸ್‌ಬುಕ್

Update: 2020-09-15 15:38 GMT

ಹೊಸದಿಲ್ಲಿ, ಸೆ. 15: ದಿಲ್ಲಿ ವಿಧಾನ ಸಭೆಯ ‘ಶಾಂತಿ ಹಾಗೂ ಸೌಹಾರ್ದ’ ಸಮಿತಿ ವಿಚಾರಣೆಯನ್ನು ಮಂಗಳವಾರ ತಪ್ಪಿಸಿಕೊಂಡಿರುವ ಫೇಸ್‌ಬುಕ್ ಇಂಡಿಯಾದ ಅಧಿಕಾರಿಗಳು, ನಾವು ಈ ತಿಂಗಳ ಆರಂಭದಲ್ಲಿ ಸಂಸದೀಯ ಸ್ಥಾಯಿ ಸಮಿತಿ ಎದುರು ಸಾಕ್ಷ್ಯ ನೀಡಿದ್ದೇವೆ ಹಾಗೂ ಸಮನ್ಸ್ ಹಿಂದೆ ತೆಗೆಯುವಂತೆ ವಿನಂತಿಸಿದ್ದೇವೆ ಎಂದಿದ್ದಾರೆ.

ಸಮಿತಿಗೆ ಬರೆದ ಪತ್ರದಲ್ಲಿ ಫೇಸ್‌ಬುಕ್, ಫೇಸ್‌ಬುಕ್‌ನಂತಹ ವೇದಿಕೆ ಮೇಲೆ ನಿಯಂತ್ರಣ ಹೇರುವ ಅಧಿಕಾರ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತದೆ. ದಿಲ್ಲಿಯ ಕಾನೂನು ಹಾಗೂ ಸುವ್ಯವಸ್ಥೆ ಕೂಡ ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಕೂಡ ಅದು ಹೇಳಿದೆ. ದಿಲ್ಲಿಯಾದ್ಯಂತ ಶಾಂತಿ ಭಂಗ ಉಂಟಾಗಲು ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸದಿರುವ ಫೇಸ್‌ಬುಕ್‌ನ ಉದ್ದೇಶಪೂರ್ವಕ ನಿಷ್ಕ್ರಿಯತೆ ಕಾರಣ ಎಂದು ಆರೋಪಿಸಿ ಸಲ್ಲಿಸಿದ ದೂರನ್ನು ಉಲ್ಲೇಖಿಸಿ ದಿಲ್ಲಿ ವಿಧಾನ ಸಭೆಯ ‘ಶಾಂತಿ ಹಾಗೂ ಸೌಹಾರ್ದತೆ’ ಸಮಿತಿ ಈ ಹಿಂದೆ ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಜಿತ್ ಮೋಹನ್‌ಗೆ ಸಮನ್ಸ್ ಕಳುಹಿಸಿತ್ತು. ಈ ಸಮನ್ಸ್ ಅನ್ನು ನಿರ್ಲಕ್ಷಿಸಿದ ಫೇಸ್‌ಬುಕ್ ಇಂಡಿಯಾ ದಿಲ್ಲಿಯ ಸಮಿತಿಗೆ ಪತ್ರ ಬರೆದಿತ್ತು.

ನಾಗರಿಕ ಹಕ್ಕುಗಳ ಸುರಕ್ಷೆಯ ತನ್ನ ವಿಚಾರಣೆಯ ಒಂದು ಭಾಗವಾಗಿ ನೋಟಿಸಿನಲ್ಲಿ ಎತ್ತಲಾದ ವಿಷಯಗಳ ಬಗ್ಗೆ ಮಾಹಿತಿ ತಂತ್ರಜ್ಞಾನದ ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆ ನಡೆಸಿದೆ ಎಂದು ಅದು ಹೇಳಿತ್ತು. ‘‘ಫೇಸ್‌ಬುಕ್‌ನಂತಹ ವೇದಿಕೆಗಳು ಭಾರತದ ವಿಶಿಷ್ಟಾಧಿಕಾರಕ್ಕೆ ಒಳಪಟ್ಟಿವೆ. ಈ ವಿಷಯ ಸಂಸತ್ತಿನ ಪರಿಶೀಲನೆಯಲ್ಲಿದೆ. ನಾವು ನೋಟಿಸಿಗೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ ಹಾಗೂ ಅದನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ’’ ಎಂದು ಫೇಸ್‌ಬುಕ್ ಇಂಡಿಯಾ ಹೇಳಿದೆ. ಫೇಸ್‌ಬುಕ್ ಪತ್ರ ಸಮಿತಿಯ ನಿರ್ಣಯವನ್ನು ನಿರ್ಲಕ್ಷಿಸಿದೆ. ಫೇಸ್‌ಬುಕ್‌ಗೆ ಹೊಸ ಸಮನ್ಸ್ ಜಾರಿಗೊಳಿಸಲಾಗುವುದು ಎಂದು ದಿಲ್ಲಿ ವಿಧಾನ ಸಭೆಯ ‘ಶಾಂತಿ ಹಾಗೂ ಸೌಹಾರ್ದ’ ಸಮಿತಿಯ ಮುಖ್ಯಸ್ಥ ರಾಘವ ಚಡ್ಡಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News