ಪರೋಲ್‌ನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ಗುಜರಾತ್ ಹತ್ಯಾಕಾಂಡದ ದೋಷಿ ಬಂಧನ

Update: 2020-09-15 15:39 GMT

ಅಹ್ಮದಾಬಾದ್, ಸೆ. 15: ಎರಡು ತಿಂಗಳ ಹಿಂದೆ ಕಾರಾಗೃಹದಿಂದ ಪರೋಲ್‌ನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ 2002ರ ಗುಜರಾತ್ ಹತ್ಯಾಕಾಂಡದ ದೋಷಿಯನ್ನು ಅಹ್ಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ದೋಷಿ ಕಲುಭಯ್ಯಾ ರಾಥೋಡ್ (43)ನನ್ನು ಸೋಮವಾರ ಬಂಧಿಸಲಾಗಿದೆ. ಆತ ಅಸೌಖ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ಕಾರಾಗೃಹದಿಂದ ಪರೋಲ್ ಮೂಲಕ ಹೊರ ಬಂದು ತಲೆಮರೆಸಿಕೊಂಡಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಕೃಷ್ಣನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಜೆ.ಆರ್. ಪಟೇಲ್ ತಿಳಿಸಿದ್ದಾರೆ.

97 ಜನರ ಸಾವಿಗೆ ಕಾರಣವಾದ ನರೋಡಾ ಪಾಟಿಯಾ ಗಲಭೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ 2018ರಲ್ಲಿ ಗುಜರಾತ್ ಉಚ್ಚ ನ್ಯಾಯಾಲಯದಿಂದ ಕೊಲೆ, ಕೊಲೆ ಯತ್ನ, ಗಲಭೆ ಹಾಗೂ ಬೆಂಕಿ ಹಚ್ಚಿರುವ ಪ್ರಕರಣಗಳಲ್ಲಿ ದೋಷಿ ಎಂದು ಪರಿಗಣಿಸಲಾಗಿದ್ದ 16 ಮಂದಿಯಲ್ಲಿ ರಾಥೋಡ್ ಕೂಡ ಸೇರಿದ್ದಾನೆ. ಉಚ್ಚ ನ್ಯಾಯಾಲಯ ರಾಥೋಡ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆತ ಅಹ್ಮದಾಬಾದ್‌ನ ಸಾಬರ್ಮತಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News