ದೇಶದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಆರಂಭ ?

Update: 2020-09-16 16:06 GMT

ಹೊಸದಿಲ್ಲಿ, ಸೆ.16: ದೇಶದ ಕೆಲವು ಭಾಗಗಳಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಆರಂಭವಾಗಿರುವ ಸಾಧ್ಯತೆಯಿದೆ ಎಂದು ದಿಲ್ಲಿಯ ಎಐಐಎಂಎಸ್ ನಿರ್ದೇಶಕ ಡಾ ರಣದೀಪ್ ಗುಲೇರಿಯಾ ಹೇಳಿದ್ದಾರೆ.

 ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ, ಸೋಂಕು ಹರಡುವ ತೀವ್ರತೆಯನ್ನು ಗಮನಿಸಿದರೆ ಈ ಶಂಕೆ ಮೂಡುತ್ತಿದೆ. ದೇಶದ ಕೆಲವೆಡೆ ಕೊರೋನ ಸೋಂಕಿನ ಬಗ್ಗೆ ಜನರು ಆಲಸ್ಯದ ಭಾವನೆ ತೋರುವಂತಾಗಿದೆ. ಸುರಕ್ಷತಾ ಕ್ರಮಗಳಿಂದ ಜನತೆ ಬೇಸತ್ತಿದ್ದಾರೆ. ದಿಲ್ಲಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ ಮತ್ತು ಸುರಕ್ಷಿತ ಅಂತರದ ನಿಯಮ ಮರೆತು ಗುಂಪುಗೂಡುವಿಕೆ ಹೆಚ್ಚುತ್ತಿದೆ . ಕೊರೋನ ಸೋಂಕಿನ ಪ್ರಮಾಣ ದಿಢೀರ್ ಹೆಚ್ಚಳವಾಗಲು ಇದು ಪ್ರಮುಖ ಕಾರಣವಾಗಿದೆ ಎಂದವರು ಹೇಳಿದ್ದಾರೆ.

ಕೊರೋನ ಸೋಂಕಿನ ಗ್ರಾಫ್ ಇಳಿಮುಖವಾಗುವ ಮುನ್ನ ಸೋಂಕಿನ ಪ್ರಮಾಣ ಗರಿಷ್ಟ ಮಟ್ಟಕ್ಕೆ ತಲುಪುತ್ತದೆ. ದೇಶದಲ್ಲೂ ಮುಂದಿನ ದಿನದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದ್ದರೂ, ಜನತೆ ಆಲಸ್ಯ ತೋರಿ ಶಿಷ್ಟಾಚಾರ ಉಲ್ಲಂಘಿಸಿದರೆ ಕೊರೋನದ ಎರಡನೇ ಅಲೆ ಉಲ್ಬಣಿಸಬಹುದು ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News