ಜಮ್ಮು-ಕಾಶ್ಮೀರ: 16.79 ಲಕ್ಷಕ್ಕೂ ಅಧಿಕ ವಾಸಸ್ಥಾನ ಪ್ರಮಾಣಪತ್ರ ಮಂಜೂರು: ಆಡಳಿತದ ಹೇಳಿಕೆ

Update: 2020-09-16 16:07 GMT

ಜಮ್ಮು, ಸೆ.16: ಇದುವರೆಗೆ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ 20 ಜಿಲ್ಲೆಗಳಲ್ಲಿ 16.79 ಲಕ್ಷಕ್ಕೂ ಅಧಿಕ ಅಧಿವಾಸ (ವಾಸಸ್ಥಾನ) ಪ್ರಮಾಣಪತ್ರ ನೀಡಲಾಗಿದೆ ಎಂದು ಜಮ್ಮು-ಕಾಶ್ಮೀರ ಆಡಳಿತ ತಿಳಿಸಿದೆ.

ಮಾರ್ಚ್ 31ರಂದು ಜಾರಿಗೊಳಿಸಿದ ಹೊಸ ಅಧಿವಾಸ ನಿಯಮದಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಾಯಂ ಆಗಿ ವಾಸಿಸುವ ಅವಕಾಶವನ್ನು ವಿಸ್ತರಿಸಲಾಗಿದೆ. ಈ ಹಿಂದೆ ರಾಜ್ಯವಾಗಿದ್ದ ಜಮ್ಮು-ಕಾಶ್ಮೀರದಲ್ಲಿ ಖಾಯಂ ನಿವಾಸಿಗಳು ಎಂದು ಕರೆಯುತ್ತಿದ್ದವರನ್ನು ಹೊಸ ನಿಯಮದಡಿ ಕೇಂದ್ರಾಡಳಿತ ಪ್ರದೇಶದ ನಿವಾಸಿಗಳು ಎಂದು ಹೆಸರಿಸಲಾಗಿದೆ. ಜಮ್ಮು-ಕಾಶ್ಮೀರದ ಆಡಳಿತ ಜೂನ್‌ನಿಂದ ಅಧಿವಾಸ ಪ್ರಮಾಣಪತ್ರವನ್ನು ನೀಡುತ್ತಿದೆ. ಹೊಸ ನಿಯಮದಡಿ, ಜಮ್ಮು-ಕಾಶ್ಮೀರದಲ್ಲಿ 15 ವರ್ಷ ವಾಸಿಸುತ್ತಿದ್ದವರು ಹಾಗೂ 7 ವರ್ಷ ವ್ಯಾಸಂಗ ಮಾಡಿದವರು, ನಿವಾಸ ಸ್ಥಾನದ ಸೌಲಭ್ಯ ಪಡೆಯಲು ಅಧಿವಾಸ ಪ್ರಮಾಣಪತ್ರ ಪಡೆಯಬಹುದು. ಜಮ್ಮು-ಕಾಶ್ಮೀರದಲ್ಲಿ ಕನಿಷ್ಟ 10 ವರ್ಷ ಕಾರ್ಯನಿರ್ವಹಿಸಿದ ಕೇಂದ್ರ ಸರಕಾರದ ಉದ್ಯೋಗಿಗಳ ಮಕ್ಕಳೂ ಅರ್ಜಿ ಸಲ್ಲಿಸಬಹುದು. ಇದುವರೆಗೆ 21,13,879 ಅರ್ಜಿ ಬಂದಿದ್ದು 16,79,520 ಜನರಿಗೆ ಪ್ರಮಾಣ ಪತ್ರ ಮಂಜೂರುಗೊಳಿಸಲಾಗಿದೆ.

ಇದರಲ್ಲಿ 14.32 ಲಕ್ಷಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ಕಾಯಂ ನಿವಾಸಿ ಪ್ರಮಾಣಪತ್ರ ಹೊಂದಿದವರಿಗೆ, 1.01 ಲಕ್ಷ ಪ್ರಮಾಣಪತ್ರಗಳನ್ನು ವಂಶಪಾರಂಪರ್ಯವಾಗಿ ಜಮ್ಮು-ಕಾಶ್ಮೀರದ ನಿವಾಸಿಗಳಾಗಿರುವವರು, 34,045 ಪ್ರಮಾಣಪತ್ರಗಳನ್ನು ವಿದ್ಯಾರ್ಥಿಗಳಿಗೆ, 45,794 ಪ್ರಮಾಣಪತ್ರಗಳನ್ನು ಇತರರಿಗೆ ಮಂಜೂರುಗೊಳಿಸಲಾಗಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. 19,751 ಪಾಕಿಸ್ತಾನಿ ನಿರಾಶ್ರಿತರಿಗೆ, 2,424 ವಾಲ್ಮೀಕಿ ಸಮುದಾಯದವರಿಗೆ 765 ಗೋರ್ಖ ಸಮುದಾಯದವರಿಗೂ ಅಧಿವಾಸ ಪ್ರಮಾಣ ಪತ್ರ ಮಂಜೂರುಗೊಳಿಸಲಾಗಿದೆ. ಅಧಿವಾಸ ಪ್ರಮಾಣಪತ್ರಕ್ಕೆ ಅರ್ಜಿಯನ್ನು ತಹಶೀಲ್ದಾರ್ ಕಚೇರಿಯಲ್ಲಿ ಅಥವಾ ಆನ್‌ಲೈನ್ ಮೂಲಕವೂ ಸಲ್ಲಿಸಬಹುದು ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News