ವಿಚಾರ ಕ್ರಾಂತಿಯೊಂದಿಗೆ ರಾಜಕೀಯ ಪ್ರಜ್ಞೆ ಮೂಡಿಸಿದ ಪೆರಿಯಾರ್

Update: 2020-09-16 18:35 GMT

ಅಸ್ಪಶ್ಯತೆ, ಜಾತಿಪದ್ಧತಿ, ಧರ್ಮಾಂಧತೆ, ಕೋಮುವಾದ, ಫಲಜ್ಯೋತಿಷ್ಯ, ಪ್ರಜಾವಿರೋಧಿ ರಾಜಕಾರಣ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮನುಷ್ಯನಿಗೆ ಜೀವನಪ್ರೀತಿ, ಮನೋಸ್ಥೈರ್ಯ, ಸ್ವಾವಲಂಬನೆ, ಸ್ವಾಭಿಮಾನಗಳನ್ನು ಮೂಡಿಸಿದ ಪೆರಿಯಾರ್ ಅವರ ಜಯಂತಿ ಬಂದಿದೆ. ರಾಷ್ಟ್ರನಿರ್ಮಾಣದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ಅವರಂತೆ ಪೆರಿಯಾರ್ ಅವರ ಕೊಡುಗೆಯೂ ಅಪಾರ.

1879ರ ಸೆಪ್ಟಂಬರ್ 17ರಂದು ಜನಿಸಿದ ಪೆರಿಯಾರ್ ಅವರ ಪೂರ್ಣ ಹೆಸರು ಈರೋಡು ವೆಂಕಟಪ್ಪರಾಮಸ್ವಾಮಿ. 1938ರಲ್ಲಿ ಅಭಿಮಾನದಿಂದ ಜನತೆ ಇಟ್ಟ ಹೆಸರು ಪೆರಿಯಾರ್. ವಿಶೇಷವೆಂದರೆ ಪೆರಿಯಾರ್ ಅವರ ಪೂರ್ವಿಕರು ಮೂಲತಃ ಕನ್ನಡಿಗರು. ಮನೆ ಮಾತು ಕನ್ನಡ. ವಿಜಯನಗರ ಸಾಮ್ರಾಜ್ಯ ಅಸ್ತಿತ್ವವಿದ್ದ ಕಾಲಘಟ್ಟದಲ್ಲಿ ಚಿತ್ರದುರ್ಗದಲ್ಲಿ ಇವರು ವಾಸವಿದ್ದವರು. ರಕ್ಕಸಗಿ-ತಂಗಡಗಿ (1565) ಯುದ್ಧದ ಸೋಲಿನಿಂದ ವಿಜಯನಗರ ಸಾಮ್ರಾಜ್ಯ ಅಧಃಪತನವಾದ ಕಾರಣ ಇವರ ಕುಟುಂಬ ವಲಸೆ ಹೊರಟು ತಮಿಳುನಾಡಿನ ಈರೋಡಿನಲ್ಲಿ ನೆಲೆಯೂರಿತು. ತಂದೆ ವೆಂಕಟಪ್ಪ ನಾಯಕ, ತಾಯಿ ಮುತ್ತಮ್ಮಾಳ್ (ಚಿನ್ನತಾಯಿ). ವೈಷ್ಣವ ಪಂಥಕ್ಕೆ ಸೇರಿದ್ದ ಇವರ ಕುಟುಂಬವು ಜವಳಿ ವ್ಯಾಪಾರ ನಡೆಸುತ್ತಿತ್ತು.

ಧಾರ್ಮಿಕ ಶೋಷಣೆಯ ಅರಿವು ಮೂಡಿಸಿದ ಕಾಶಿಯಾತ್ರೆ: ತಮ್ಮ ಕುಟುಂಬದ ಕಾರಣವಾಗಿ ಸಾಂಪ್ರದಾಯಕ ನಂಬಿಕೆ ಹೊಂದಿದ್ದ ಪೆರಿಯಾರ್ ಒಮ್ಮೆ ಕಾಶಿಯಾತ್ರೆ ಕೈಗೊಂಡಿದ್ದರು. ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಅನ್ನದಾನ ಛತ್ರವೊಂದಕ್ಕೆ ಪ್ರವೇಶಿಸಿ ಊಟಕ್ಕೆ ಕೂತರು. ಇವರ ಜಾತಿಯನ್ನು ಕೇಳಿದ ಅಲ್ಲಿನ ಸಂಪ್ರದಾಯಸ್ಥರು ಕರುಣೆ ತೋರದೆ ಹೊರಗೆ ಓಡಿಸಿದರು. ಕಾಶಿಯಲ್ಲಿ ನಡೆಯುತ್ತಿದ್ದ ಭಿಕ್ಷಾಟನೆ, ವಿಧವೆಯರ ಶೋಷಣೆ, ಪುರೋಹಿತಶಾಹಿಯ ಅಟ್ಟಹಾಸ ಪೆರಿಯಾರರನ್ನು ಕಂಗೆಡಿಸಿತ್ತು.

ಸ್ವಾತಂತ್ರ್ಯ ಚಳವಳಿಯತ್ತ: ತಮ್ಮ ಜನಪರ ಕಾಳಜಿಯಿಂದಾಗಿ ಪೆರಿಯಾರ್ 1918ರಲ್ಲಿ ಈರೋಡಿನ ನಗರಸಭೆಯ ಅಧ್ಯಕ್ಷರಾಗಿದ್ದರು. ತಮಗೆ ಆತ್ಮೀಯರಾಗಿದ್ದ ಸಿ. ರಾಜಗೋಪಾಲಚಾರಿ ಹಾಗೂ ವರದರಾಜುಲು ನಾಯ್ಡು ಅವರ ಪ್ರೇರಣೆಯಿಂದ ಗಾಂಧೀಜಿಯವರ ಪರಿಚಯ ಪೆರಿಯಾರ್‌ಗಾಯಿತು. 1919ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರುವ ಮೂಲಕ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಮದ್ಯಪಾನ ನಿಷೇಧಕ್ಕಾಗಿ ಕರೆಕೊಟ್ಟ ಗಾಂಧೀಜಿಯವರ ಘೋಷಣೆಯನ್ನು ಗೌರವಿಸಿದ ಪೆರಿಯಾರರು ಸ್ವತಃ ತಮ್ಮ ತೋಟದಲ್ಲಿ ಸೇಂದಿ ಇಳಿಸುತ್ತಿದ್ದ ಸುಮಾರು 500 ತೆಂಗಿನ ಮರಗಳನ್ನು ಕಡಿದುಹಾಕುವ ಮೂಲಕ ಮದ್ಯಪಾನ ನಿಷೇಧ ಚಳವಳಿಯನ್ನು ಮುನ್ನಡೆಸಿದರು.

ಗಾಂಧೀಜಿ ಖಾದಿ ಧರಿಸಬೇಕೆಂದು ಕರೆಕೊಟ್ಟ ಸಂದರ್ಭದಲ್ಲಿ ತಮ್ಮ ಜೊತೆಗೆ ತಮ್ಮ ಇಡೀ ಕುಟುಂಬವೇ ಖಾದಿ ಬಟ್ಟೆ ಧರಿಸುವಂತೆ ಮಾಡಿದರು. ಮುಂದೆ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಕೂಡ ಆಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು.

ಶಿಕ್ಷಣ ಕ್ಷೇತ್ರ ಹಾಗೂ ಸರಕಾರಿ ಹುದ್ದೆಗಳಲ್ಲಿ ಶೂದ್ರ ಸಮುದಾಯಗಳಿಗೆ ಮೀಸಲಾತಿಯ ಅಗತ್ಯವನ್ನು ಸಮರ್ಥಿಸಿ, ಜಾರಿಗೆ ತರಲು ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ನಡೆದ ತಿರುನೆಲ್ವೇಲಿ (1920), ತಂಜಾವೂರು (1921), ತಿರುಪ್ಪೂರು (1922), ಸೇಲಂ (1923), ತಿರುವಣ್ಣಾಮಲೈ ಅದಿವೇಶನಗಳಲ್ಲೂ ನಿರ್ಣಯ ಮಂಡಿಸಿದರು. ಆದರೆ ಸಂಪ್ರದಾಯವಾದಿಗಳು ಪ್ರತಿ ಸಲವೂ ಇದನ್ನು ನಿರಾಕರಿಸಿದರು. ಜಾತಿ ಹಾಗೂ ಅಸ್ಪೃಶ್ಯತೆ ವಿರುದ್ಧ ಹೋರಾಡದ ಅಂದಿನ ಕಾಂಗ್ರೆಸ್‌ನ್ನು ವಿರೋಧಿಸಿ ತಮ್ಮ ಅಧ್ಯಕ್ಷ ಪದವಿಗೆ 1925ರಲ್ಲಿ ರಾಜೀನಾಮೆ ನೀಡಿ ಹೊರಬಂದರು.

ವೈಕಂ ಹೋರಾಟ: ಆಗಿನ ತಿರುವಾಂಕೂರು ಸಂಸ್ಥಾನಕ್ಕೆ ಸೇರಿದ ವೈಕಂ ನಗರದ ವೈಕಂತಪ್ಪ ದೇವಾಲಯಕ್ಕೆ ದಲಿತರಿಗೆ ಪ್ರವೇಶ ಇರಲಿಲ್ಲ. ಅಷ್ಟೇ ಅಲ್ಲ ದೇವಾಲಯದ ಪಕ್ಕದ ರಸ್ತೆಯಲ್ಲಿ ನಡೆದಾಡುವಂತಿರಲಿಲ್ಲ. ಸಂಪ್ರದಾಯದ ಹೆಸರಿನ ಇಂತಹ ಅಮಾನವೀಯ ಆಚರಣೆಯನ್ನು ಖಂಡಿಸಿ 1924-25ರಲ್ಲಿ ಇದರ ವಿರುದ್ಧ ತಮ್ಮ ಪತ್ನಿ ನಾಗಮ್ಮಾಳ್ ಅವರೊಂದಿಗೆ ಹೋರಾಟ ರೂಪಿಸಿ ಜೈಲು ಸೇರಿದರು. ಆದರೂ ಎದೆಗುಂದದೆ ಸುಮಾರು ಒಂದು ವರ್ಷ ಕಾಲ ಹೋರಾಟ ನಡೆಸಿ ವೈಕಂ ದೇವಾಲಯದ ಆಸುಪಾಸಿನಲ್ಲಿ ದಲಿತರು ಓಡಾಡಲು ಅವಕಾಶ ಮಾಡಿಸಿಕೊಟ್ಟರು. ಈ ಕಾರಣಕ್ಕಾಗಿ ಜನತೆ ಅವರನ್ನು ‘ವೈಕಂ ವೀರ’ ಎಂಬ ಬಿರುದು ನೀಡಿ ಸನ್ಮಾನಿಸಿದರು.

ಜಾತಿಪದ್ಧತಿ ವಿರುದ್ಧ:  ಆಗಿನ ಕಾಲಕ್ಕೆ ಶಿಕ್ಷಣ ಕ್ಷೇತ್ರವೂ ಒಳಗೊಂಡಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಶೂದ್ರ ಹಾಗೂ ದಲಿತರಿಗೆ ಅವಕಾಶವೇ ಇಲ್ಲವಾಗಿತ್ತು. ಹಾಗಾಗಿ ಎಲ್ಲ ಜಾತಿ, ಹಿನ್ನೆಲೆಯ ಮಕ್ಕಳು ಯಾವುದೇ ತಾರತಮ್ಯವಿಲ್ಲದೆ ಅಕ್ಷರ ಕಲಿಯಲು ತಮಿಳುನಾಡಿನ ಕಾರೈಕ್ಕುಡಿ ಹತ್ತಿರದ ಸಿರುವಯಲ್ ಎಂಬಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು.

ಜಾತಿಯ ಕಾರಣದಿಂದ ಉದ್ಭವಿಸುವ ಮೇಲರಿಮೆ ಮತ್ತು ಕೀಳರಿಮೆಯನ್ನು ಕಳೆದುಕೊಂಡು ಮನುಷ್ಯ ಸಹಜವಾಗಿ ಬದುಕಬೇಕೆಂದು ಕರೆ ನೀಡಿದರು. ಜಾತಿಸೂಚಕ ಹೆಸರುಗಳನ್ನು ಯಾರೊಬ್ಬರೂ ಇಟ್ಟುಕೊಳ್ಳಬಾರದೆಂದು ಹಾಗೂ ತಮ್ಮ ಮಕ್ಕಳಿಗೂ ಇಡಬಾರದೆಂದು ಪ್ರತಿಪಾದಿಸಿದ ಪೆರಿಯಾರರು ಸ್ವತಃ ತಮ್ಮ ಹೆಸರಿನಲ್ಲಿದ್ದ ನಾಯ್ಕರ್ ಎಂಬುದನ್ನು 1929ರಲ್ಲಿ ಸಾರ್ವಜನಿಕವಾಗಿ ತ್ಯಜಿಸಿದರು.

ಭಾರತದ ಬಹುಪಾಲು ಜಾತಿಗಳು ಪುರಾಣಗಳನ್ನು ತಮ್ಮ ಜಾತಿಯ ಬಗ್ಗೆ ಕಟ್ಟಿಕೊಂಡಿರುತ್ತವೆ. ಅವುಗಳಲ್ಲಿ ಬಹುಪಾಲು ಪುರಾಣಗಳು ಜಾತಿಯ ಅಹಮಿಕೆಯನ್ನು ಇಲ್ಲವೆ ಜಾತಿ ಹೀನತೆಯನ್ನು ಹೇಳುವುದಾಗಿದೆ. ಈ ಕಾರಣವಾಗಿಯೇ ಪೆರಿಯಾರ್ ಯಾವುದೇ ಜಾತಿಯ ಸಭೆಗೆ ತಮ್ಮನ್ನು ಕರೆದಾಗ ಆ ಜಾತಿ ಸಮುದಾಯವು ತನ್ನನ್ನು ತಾನು ವಿಮರ್ಶಿಸಿಕೊಂಡು ಆತ್ಮಾವಲೋಕನ ಮಾಡಿಕೊಂಡು ಸ್ವಾಭಿಮಾನ ಹಾಗೂ ಜಾತ್ಯಾತೀತವಾಗಿ ಬದುಕಲು ಪ್ರೇರೇಪಿಸುತ್ತಿದ್ದರು. ವನ್ನಿಯ ಕುಲ ಕ್ಷತ್ರಿಯ ಸಮಾಜದವರು ನಡೆಸಿದ ಜಾತಿ ಸಮ್ಮೇಳನದ ಸಭೆಯಲ್ಲಿ ಪೆರಿಯಾರ್ ಆಡಿದ ಮಾತು ಉಲ್ಲೇಖನೀಯ: ‘‘ಸಹೋದರರೇ, ಸಾಮಾನ್ಯವಾಗಿ ಇಂತಹ ಜಾತಿ ಪರವಾದ ಸಮ್ಮೇಳನಗಳನ್ನು ಇನ್ನು ಮುಂದಕ್ಕೆ ಸಂಘಟಿಸುವುದಾದರೆ ಅವನ್ನು ನಿಮ್ಮ ನಿಮ್ಮ ಜಾತಿ ಹಿರಿಮೆಯನ್ನು ಹೊಗಳುವ ಅಜ್ಜಿಕಥೆಗಳನ್ನು ಮಾತಾಡುವ ಸಮ್ಮೇಳನವಾಗಿ ಪರಿವರ್ತಿಸಬೇಡಿ. ನಿಮ್ಮ ಜಾತಿ ಹಿರಿತನವನ್ನು ತೋರಿಕೊಂಡು ನಿಮಗೆ ನೀವೇ ಪ್ರತ್ಯೇಕವಾಗಿ ಇರಬೇಕೆಂಬ ಮನೋಭಾವವನ್ನು ಎತ್ತಿ ಹಿಡಿಯುವುದಕ್ಕಾಗಿ ಇಂತಹ ಸಮ್ಮೇಳನಗಳನ್ನು ಎಂದಿಗೂ ಕರೆಯಬಾರದು. ಬದಲಿಗೆ ಸಮ್ಮೇಳನದ ಪ್ರಯುಕ್ತವಾಗಿ ನಿಮ್ಮ ಜಾತಿಯ ಮೇಲೆ ಮತ್ತೊಂದು ಜಾತಿ ಇದೆ ಎಂಬ ಭಾವನೆಯನ್ನು, ಹಾಗೆಯೇ ನಿಮ್ಮ ಜಾತಿ ಇತರ ಜಾತಿಯವರಿಗಿಂತ ಉತ್ತಮ ಮೇಲ್ಜಾತಿ ಎಂಬ ಭಾವನೆಗಳನ್ನು ಬುಡಸಮೇತ ತೊಡೆದು ಹಾಕುವುದಾದರೆ ಅದನ್ನು ನಾನು ಹೃತ್ಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ.’’ ಮಾನವೆರಲ್ಲರೂ ಸಮಾನರು ಎಂಬ ಪ್ರಜ್ಞೆ ತುಂಬುವ ಈ ಮಾತು, ಇಂದು ಜಾತಿ ಸಂಘಟನೆಗಳು ಯಾವ ಹಾದಿಯಲ್ಲಿ ನಡೆಯಬೇಕೆಂಬುದಕ್ಕೆ ದಿಕ್ಸೂಚಿಯಾಗಿದೆ.

ಸ್ವಾಭಿಮಾನಿ ಚಳವಳಿಯ ಆರಂಭ: ಹಿಂದೂ ಧರ್ಮದೊಳಗಿನ ಚಾತುರ್ವರ್ಣ, ಜಾತಿಪದ್ಧತಿ, ಅಸ್ಪೃಶ್ಯತೆ ಹಾಗೂ ಲಿಂಗತಾರತಮ್ಯ ಇವುಗಳ ಹಿಂದೆ ಇರುವ ಧಾರ್ಮಿಕ ಕಾರಣಗಳನ್ನು ಪೆರಿಯಾರ್ ಪತ್ತೆ ಹಚ್ಚಿದರು. ಭಾರತದಲ್ಲಿ ಆರ್ಯ-ದ್ರಾವಿಡ ಎಂಬ ಜನಾಂಗೀಯವಾದವಿದ್ದು ದ್ರಾವಿಡರನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಹತ್ತಿಕ್ಕಲಾಗುತ್ತಿದೆ ಹಾಗೂ ಅವರನ್ನು ಕೀಳರಿಮೆಯಿಂದ ಬಳಲುವಂತೆ ಮಾಡಿದೆ ಎಂಬುದನ್ನು ತಿಳಿಸುವ ಸಲುವಾಗಿ 1925ರಲ್ಲಿ ಸ್ವಾಭಿಮಾನಿ ಚಳವಳಿಯನ್ನು ಆರಂಭಿಸಿದರು. ಇದಕ್ಕೆ ಪೂರಕವಾಗಿ ‘ಕುಡಿಯರಸು’ ಎಂಬ ತಮಿಳು ಪತ್ರಿಕೆಯನ್ನು ಹೊರತಂದರು. ಮುಂದೆ ಇಂಗ್ಲಿಷ್‌ನಲ್ಲಿ ರಿವೋಲ್ಟ್(1928), ತಮಿಳಿನಲ್ಲಿ ಪುರುಚಿ(1933) ಹಾಗೂ ವಿಡುದಲೈ(1937) ಪತ್ರಿಕೆಗಳನ್ನು ಸಹ ತಂದರು. ಈ ಪತ್ರಿಕೆಗಳ ಮೂಲಕ ಹಾಗೂ ಸಾರ್ವಜನಿಕವಾಗಿ ಧರ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತಿರುವ ಮೌಢ್ಯಗಳನ್ನು ಖಂಡಿಸಿ ಮಾನವೀಯತೆಯ ಅಗತ್ಯವನ್ನು ಸಾರುವ ವಿಚಾರವಾದಿ ಸಮಾವೇಶಗಳನ್ನು ನಡೆಸತೊಡಗಿದರು. ಜಾತಿಪದ್ಧತಿಯಷ್ಟೇ ತೀವ್ರತರವಾಗಿ ಬಾಲ್ಯವಿವಾಹ, ವಿಧವಾ, ದೇವದಾಸಿ, ವರದಕ್ಷಿಣೆ ಪದ್ಧತಿಗಳನ್ನು ಖಂಡಿಸಿದರು.

ಸ್ವಾಭಿಮಾನಿ ಮದುವೆ: ಸಾಂಪ್ರದಾಯಿಕ, ಅದ್ಧೂರಿ ಮದುವೆಗಳನ್ನು ಮತ್ತು ಈ ಸಂದರ್ಭದಲ್ಲಿ ಪುರೋಹಿತರನ್ನು ಕರೆಯುವುದನ್ನು ವಿರೋಧಿಸಿದ ಪೆರಿಯಾರ್ ತಾವೇ ಒಂದು ವಿವಾಹ ಸಂಹಿತೆಯನ್ನು ರೂಪಿಸಿದರು. ಮದುವೆಯಾಗುವ ಯುವಕ-ಯುವತಿಯರು ಜಾತಿಪದ್ಧತಿಯ ಹಂಗಿಲ್ಲದೆ, ಮಂತ್ರಘೋಷವಿಲ್ಲದೆ, ತಾಳಿಯ ಸಂಕೋಲೆಯೂ ಇಲ್ಲದೆ ಪರಸ್ಪರ ಒಪ್ಪಿವಿವಾಹವಾಗುವ ಮೂಲಕ ಬಾಳಸಂಗಾತಿಗಳಾಗಬಹುದೆಂದು ತಿಳಿಸಿದರು. ಯಾವುದೇ ಜಾತಿಗೆ ಸೇರಿದ ಹಿರಿಯರೊಬ್ಬರು ವಧು-ವರರಿಗೆ ವಿವಾಹ ಸಂಹಿತೆ ಬೋಧಿಸಬಹುದಿತ್ತು. ಇದು ಸ್ವಾಭಿಮಾನಿ ಹೋರಾಟಕ್ಕೆ ಪೂರಕವಾಗಿ ಪ್ರಸಿದ್ಧಿಗೆ ಬಂದಿತು. ಅಂತರ್ಜಾತಿ ವಿವಾಹದ ಜೊತೆಗೆ ವಿಧವಾ ವಿವಾಹಕ್ಕೂ ಪೆರಿಯಾರ್ ಉತ್ತೇಜನ ನೀಡಿದರು. ಇಂತಹ ಮದುವೆಗೆ ಸಂಪ್ರದಾಯವಾದಿಗಳ ಪ್ರತಿರೋಧವಿತ್ತು. ಆದರೆ ಪೆರಿಯಾರರ ವಿಚಾರಧಾರೆಗಳಿಂದ ಪ್ರಭಾವಿತರಾದ ಸಾವಿರಾರು ಯುವಕ-ಯುವತಿಯರು ಹಾಗೂ ಪೋಷಕರು ಸರಳ, ಸಾಂಪ್ರದಾಯ ವಿರೋಧಿ ಮದುವೆಗಳನ್ನು ಬೆಂಬಲಿಸಿದರು.

ರಾಜಕೀಯ ಪ್ರಜ್ಞೆಯ ಅನಿವಾರ್ಯತೆ: ವೈಚಾರಿಕತೆ ಹಾಗೂ ಸಾಮಾಜಿಕ ಸುಧಾರಣೆಯ ಜೊತೆಗೆ ರಾಜಕೀಯ ಪ್ರಜ್ಞೆಯ ಅಗತ್ಯವನ್ನು ಪೆರಿಯಾರರು ಮನಗಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಅದಾಗಲೇ ತೊಡಗಿಕೊಂಡಿದ್ದ ಜಸ್ಟೀಸ್ ಪಾರ್ಟಿಯ ಅಧ್ಯಕ್ಷರಾಗಿ 1938ರಲ್ಲಿ ಆಯ್ಕೆಯಾದರು. 1944ರಲ್ಲಿ ‘ದ್ರಾವಿಡ ಕಳಗಂ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಮೂಲಕ, ಜಸ್ಟೀಸ್ ಪಾರ್ಟಿಯನ್ನು ಇದರೊಂದಿಗೆ ವಿಲೀನಗೊಳಿಸಿದರು. ಜೀವಪರ ವೈಚಾರಿಕತೆಯ ತಳಹದಿ ಮೇಲೆ ರಾಜಕಾರಣವಿರಬೇಕೆಂದು ನಂಬಿದ್ದ ಪೆರಿಯಾರರು ಈ ಪಕ್ಷದ ಮೂಲಕ ಜನತೆಯಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸತೊಡಗಿದರು. ಇವರ ಜಾಗೃತಿಯ ಕಾರಣವಾಗಿ ತಮಿಳುನಾಡಿನಲ್ಲಿ ದ್ರಾವಿಡ ಕಳಗಂ ಪಕ್ಷವೇ ಅಧಿಕಾರಕ್ಕೆ ಬಂದಿತು.

ಮುಂದೆ ಕಾರಣಾಂತರಗಳಿಂದ ದ್ರಾವಿಡ ಕಳಗಂ ಪಕ್ಷವು ಎರಡು ಹೋಳಾಯಿತು. ಅಣ್ಣಾದೊರೈ ಅವರ ನಾಯಕತ್ವದಲ್ಲಿ 1949ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಉದಯಿಸಿತು. ಆದರೆ ಅದರ ಮೂಲಭೂತ ಸಿದ್ಧಾಂತವು ಕೂಡ ಪೆರಿಯಾರರದೇ ಆಗಿತ್ತು.

ಪೆರಿಯಾರ್‌ರಿಗೆ ಡಾ. ಬಿ. ಆರ್. ಅಂಬೇಡ್ಕರ್, ಡಾ. ಲೋಹಿಯಾ, ಜಯಪ್ರಕಾಶ ನಾರಾಯಣರ ಸಂಪರ್ಕವಿತ್ತು. ಆದರೂ ಅವರ ಹೋರಾಟ ತಮಿಳುನಾಡಿಗಷ್ಟೇ ಸೀಮಿತವಾಯಿತು.

ಪೆರಿಯಾರ್ ಅವರ ಜೀವಮಾನದ ಬದ್ಧತೆಯ ಹೋರಾಟ ಮತ್ತು ಸಾಧನೆಯನ್ನು ಗುರುತಿಸಿ ಅಂತರ್‌ರಾಷ್ಟ್ರೀಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯು (UNESCO) 1971ರ ಜೂನ್‌ನಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಅದು ತಾನು ಕೊಟ್ಟ ಅಭಿನಂದನಾ ಪತ್ರದಲ್ಲಿ ಪೆರಿಯಾರರನ್ನು ಕುರಿತು ‘‘ನವಯುಗದ ಪ್ರವಾದಿ, ಆಗ್ನೇಯ ಏಷಿಯಾದ ಸಾಕ್ರಟೀಸ್, ಸಮಾಜ ಸುಧಾರಣಾ ಚಳವಳಿಯ ತಂದೆ, ಅಜ್ಞಾನಗಳ ಕಡುವೈರಿ. ಅಂಧಶ್ರದ್ಧೆ, ಕಂದಾಚಾರ, ಮೌಢ್ಯಗಳನ್ನು ನೆಲಸಮ ಮಾಡುವ ಬುಲ್ಡೋಜರ್’’ ಎಂದು ದಾಖಲಿಸಿತು.

ತಮ್ಮ ಬದುಕಿನುದ್ದಕ್ಕೂ ವಿಚಾರವಾದಿ ಹಾಗೂ ರಾಜಕೀಯ ಮಾರ್ಗದರ್ಶಕರಾಗಿ ಉಳಿದಿದ್ದ ಪೆರಿಯಾರರು 95 ವರ್ಷಗಳ ತುಂಬುಜೀವನ ನಡೆಸಿ 1973ರ ಡಿಸೆಂಬರ್ 23ರಂದು ನಿಧನ ಹೊಂದಿದರು. ಅವರ ಬದುಕು ಹೋರಾಟ ಚಿಂತನೆಗಳಲ್ಲಿ ಕೆಲವು ಚರ್ಚಾರ್ಹವಾಗಿವೆ. ಆದರೆ ಹಲವು ವಿಷಯಗಳು ಇಂದಿಗೂ ಮಾದರಿಯೆನಿಸುತ್ತವೆ.

Writer - ಡಾ. ಎಸ್. ನರೇಂದ್ರಕುಮಾರ್

contributor

Editor - ಡಾ. ಎಸ್. ನರೇಂದ್ರಕುಮಾರ್

contributor

Similar News