ಪುತ್ತೂರಿನ ಪ್ರಜ್ವಲ್ ನಿರ್ದೇಶನದ ‘ಮೌನ ಮಾತಾದಾಗ’ ಕಿರುಚಿತ್ರಕ್ಕೆ ಅಂತರ್‌ರಾಷ್ಟ್ರೀಯ ಪ್ರಶಸ್ತಿ

Update: 2020-09-17 07:53 GMT

ಪುತ್ತೂರು, ಸೆ.17: ಪುತ್ತೂರಿನ ಯುವಕ ಪ್ರಜ್ವಲ್ ಕರ್ಪೆ ನಿರ್ದೇಶನದ ‘ಮೌನ ಮಾತಾದಾಗ’ ಕಿರುಚಿತ್ರವು ಜರ್ಮನಿಯಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರದರ್ಶನದಲ್ಲಿ ಬೆಸ್ಟ್ ಫಿಲ್ಮ್ ಅವಾರ್ಡ್ ಗಳಿಸಿದೆ.

ಯಶಸ್ ಕರಂ ಲಾಂಛನದ ಈ ಕಿರುಚಿತ್ರವನ್ನು ಇಲ್ಲಿನ ಕೋರ್ಟ್ ರಸ್ತೆ ನಿವಾಸಿ ಪ್ರಜ್ವಲ್ ಕರ್ಪೆ ನಿರ್ದೇಶಿಸಿದ್ದಾರೆ. ಯೂಟ್ಯೂಬ್‌ನಲ್ಲೂ ಗಮನಸೆಳೆದಿದ್ದ ಯಾವುದೇ ಮಾತಿಲ್ಲದ ಈ ಕಿರುಚಿತ್ರ ಮಾನವೀಯ ಮೌಲ್ಯದ ಬಗ್ಗೆ ಸಂದೇಶ ಸಾರುವ ಉತ್ತಮ ಕಥಾ ಹಂದಾರವನ್ನು ಹೊಂದಿದ್ದು, ನೈಜ ಘಟನೆಯಾಧಾರಿತವಾಗಿದೆ.

ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿರುವ ‘ಮೌನ ಮಾತಾದಾಗ’ ನೀನು ಏನು ನೆಡುತ್ತೀಯೋ ಅದೇ ಫಲ ನಿನಗೆ ಸಿಗುತ್ತದೆ ಎಂದು ಕರ್ಮ ಸಿದ್ಧಾಂತವನ್ನು ಸಾರುತ್ತದೆ. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ರಂಗನಟ, ಸಿನಿಮಾ ನಟ ಸುಬ್ರಹ್ಮಣ್ಯ ಪೈ ಬಿ.ಸಿ.ರೋಡ್ ಹಾಗೂ ಹಿರಿಯ ಸಾಹಿತಿ, ನಟ ಡಾ.ಕಾಸರಗೋಡು ಅಶೋಕ್ ಕುಮಾರ್ ನಟಿಸಿದ್ದಾರೆ. ಉಳಿದ ಪಾತ್ರಗಳಲ್ಲಿ ಪ್ರಜ್ವಲ್ ಕರ್ಪೆ, ಚಿರಾಗ್ ಮತ್ತಿತರರು ಕಾಣಿಸಿಕೊಂಡಿದ್ದಾರೆ.

 ಏಷ್ಯನ್ ಇಂಟರ್‌ನ್ಯಾಷನಲ್ ಫಿಲ್ಮ್ ಪೆಸ್ಟಿವಲ್ ಪ್ರದರ್ಶನಕ್ಕೆ ಈ ಕಿರು ಚಿತ್ರ ಆಯ್ಕೆಗೊಂಡಿತ್ತು. ಸೆ.6ಕ್ಕೆ ಜರ್ಮನಿಯ ಬರ್ಲಿನ್ ಮ್ಯಾಕ್ಸಿಂ ಗಾರ್ಕಿ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು, ಬೆಸ್ಟ್ ಫಿಲ್ಮ್ ಅವಾರ್ಡ್ ಲಭಿಸಿದೆ.

ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂ.ಟೆಕ್ ಮಾಡಿರುವ ಪ್ರಜ್ವಲ್ ಕರ್ಪೆ ಅವರು ಮಂಗಳೂರು ಶ್ರೀನಿವಾಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಇದೀಗ ಉಪನ್ಯಾಸಕ ವೃತ್ತಿಯನ್ನು ತೊರೆದು ಚಲನಚಿತ್ರ ನಿರ್ದೇಶನದಲ್ಲೇ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಅವರು ತುಳು ಚಿತ್ರ ‘ಭೋಜರಾಜ ಬಿ.ಎಂ.ಎಸ್.’ನಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಕನ್ನಡ ಮತ್ತು ತುಳು ಚಿತ್ರದ ಕೆಲವೊಂದು ಪಾತ್ರಗಳಲ್ಲಿ ನಟಿಸಿರುವ ಪ್ರಜ್ವಲ್ ಅವರು ಪುತ್ತೂರು ಕೋರ್ಟ್ ರಸ್ತೆ ನಿವಾಸಿ ವಸುಂಧರ ಕೆ. ಮತ್ತು ಚಂಚಲಾಕ್ಷಿ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News