ವಿ4 ಸ್ಟ್ರೀಮ್‌ನಲ್ಲಿ ಮೂಡಿಬರಲಿದೆ ‘ಮಾಯಾನಗರದ ವಜ್ರದ ಕಥೆ’

Update: 2020-09-17 11:58 GMT

ಮಂಗಳೂರು, ಸೆ.17: ಕನ್ನಡದ ಪ್ರಥಮ ಒಟಿಟಿ ಪ್ಲ್ಯಾಟ್‌ಫಾರ್ಮ್ ‘ವಿ4 ಸ್ಟ್ರೀಮ್’ ಮೂಲಕ ಮಾಯಾನಗರದ ವಜ್ರದ ಕಥೆ ಎನ್ನುವ ತುಳು ಸಿನೆಮಾ ತೆರೆ ಕಾಣಲಿದೆ. ಕನ್ನಡ ಭಾಷೆಯಲ್ಲಿ ಮೂಡಿಬಂದು ಪ್ರೇಕ್ಷಕರ ಮನಗೆದ್ದಿದ್ದ ಈ ಸಿನಿಮಾ ಇದೀಗ ತುಳು ಭಾಷೆಗೆ ಡಬ್ ಆಗಿದ್ದು, ಸೆ.18ರಿಂದ ‘ವಿ4 ಸ್ಟ್ರೀಮ್’ನಲ್ಲಿ ಮೂಡಿಬರಲಿದೆ ಎಂದು ವಿ4 ನ್ಯೂಸ್ ಪ್ರಕಟನೆ ತಿಳಿಸಿದೆ.

ಮಾಯಾನಗರದ ವಜ್ರದ ಕಥೆ ಸಿನಿಮಾದ ಟೈಟಲೇ ಹೇಳುವಂತೆ ಇದು ನಿಗೂಢವಾದ ರಹಸ್ಯ ಹೊಂದಿರುವ ಸಿನೆಮಾ. ಮೂಲತಃ ಆರ್ಕಿಟೆಕ್ಟ್ ಆಗಿರುವ ನಾಗರಾಜ್ ಮುರ್ಡೇಶ್ವರ ಈ ಸಿನಿಮಾದ ನಿರ್ಮಾಪಕರು. ಈಶ್ವರ್ ಪೋಲಂಕಿ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗಿದೆ. ಪ್ರತೀ ಕ್ಷಣ ಬೆಚ್ಚಿಬೀಳಿಸುವ ಸೀಕ್ವೆನ್ಸ್‌ಗಳನ್ನು ಹೊಂದಿರುವ ಸಿನಿಮಾವು ಸಸ್ಪೆನ್ಸ್, ಆ್ಯಕ್ಷನ್, ರೊಮ್ಯಾನ್ಸ್ ಹೀಗೆ ಎಲ್ಲ ಅಂಶಗಳನ್ನು ಹೊಂದಿದೆ.

ಸಿನಿಮಾದಲ್ಲಿ ದಾವಣಗೆರೆಯ ಹುಡುಗ ಅರ್ಜುನ್ ಸಹಾನ್ ಮತ್ತು ರೂಪಿಕಾ ನಾಯಕ, ನಾಯಕಿಯರಾಗಿದ್ದಾರೆ. ರವಿ ಚೇತನ್ ವಿಲನ್ ಆಗಿ ನಟಿಸಿದ್ದಾರೆ. ಪವನ್ ಪಾರ್ಥ ಸಂಗೀತ ಒದಗಿಸಿದ್ದಾರೆ.

ಮಾಯಾನಗರದ ವಜ್ರದ ಕಥೆ ವಿ4 ಸ್ಟ್ರೀಮ್‌ನಲ್ಲಿ ರಿಲೀಸ್ ಆಗುತ್ತಿರುವ ಎರಡನೇ ತುಳು ಡಬ್ಬಿಂಗ್ ಸಿನಿಮಾವಾಗಿದೆ. ಅನೇಕ ಬಗೆಯ ವಿನೂತನ ತಾಂತ್ರಿಕ ಅಂಶಗಳನ್ನು ಹೊಂದಿಕೊಂಡಿರುವ ಈ ಸಿನಿಮಾದ ಪಾತ್ರಗಳಿಗೆ ಕರಾವಳಿಯ ಅನೇಕ ಪ್ರತಿಭೆಗಳು ಧ್ವನಿ ನೀಡಿದ್ದಾರೆ. ಈ ಮೂಲಕ ತುಳುಭಾಷೆಗೆ ಒಂದು ಅನನ್ಯ ಬಗೆಯ ಸಿನಿಮಾವನ್ನು ವಿ4 ಸ್ಟ್ರೀಮ್ ನೀಡುತ್ತಿದೆ.

ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್‌ನಿಂದ 'V4Stream' ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಿನಿಮಾ ನೋಡಿ ಆನಂದಿಸಬಹುದು ಎಂದು ಪ್ರಕಟನೆ ತಿಳಿಸಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News