ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ರಾಜೀನಾಮೆ

Update: 2020-09-17 18:13 GMT

ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಕೇಂದ್ರ ಸಚಿವೆ, ಶಿರೋಮಣಿ ಅಕಾಲಿ ದಳದ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದಾರೆ.

ಅಕಾಲಿ ದಳ ಬಿಜೆಪಿ ಮತ್ತು ಕೇಂದ್ರ ಸರಕಾರಕ್ಕೆ ಬೆಂಬಲವನ್ನು ಮುಂದುವರಿಸಲಿದೆ ಎಂದ ಪಕ್ಷದ ನಾಯಕ ಮತ್ತು ಹರ್ಸಿಮ್ರತ್ ಕೌರ್ ಪತಿ ಸುಖ್ ಬೀರ್ ಬಾದಲ್, ಆದರೆ ಸರಕಾರದ ‘ರೈತ ವಿರೋಧಿ ರಾಜಕೀಯ’ವನ್ನು ವಿರೋಧಿಸುವುದಾಗಿ ತಿಳಿಸಿದರು.

ಕೃಷಿ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಎಂದು ಸರಕಾರ ಹೇಳುತ್ತಿರುವ ಈ ಮಸೂದೆಗಳ ವಿರುದ್ಧ ಪಂಜಾಬ್ ಮತ್ತು ಹರ್ಯಾಣದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಹರ್‌ಸಿಮ್ರತ್ ಕೌರ್ ಬಾದಲ್ ಮೋದಿ ಸರಕಾರದಲ್ಲಿರುವ ಶಿರೋಮಣಿ ಅಕಾಲಿ ದಳದ ಏಕೈಕ ಪ್ರತಿನಿಧಿ. ಪಂಜಾಬ್‌ನ ಈ ಪಕ್ಷ ಬಿಜೆಪಿಯ ಅತಿ ಹಳೆಯ ಮಿತ್ರ ಪಕ್ಷ. ಲೋಕಸಭೆಯಲ್ಲಿ ಮಂಗಳವಾರ ನಡೆದ ಮತದಾನದಲ್ಲಿ ಶಿರೋಮಣಿ ಅಕಾಲಿ ದಳ ಕೃಷಿ ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಿತ್ತು. ಕೃಷಿ ವಲಯದ ಸುಧಾರಣೆಗೆ ದೊಡ್ಡ ಟಿಕೆಟ್ ಎಂದು ಬಿಜೆಪಿ ಪ್ರತಿಪಾದಿಸುತ್ತಿರುವ ಮಸೂದೆಯಿಂದ ಪಂಜಾಬ್ ಹಾಗೂ ಹರ್ಯಾಣದ ರೈತರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಈ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಿದ್ದ ಶಿರೋಮಣಿ ಅಕಾಲಿ ದಳ ಈ ಕಾಯ್ದೆಯಿಂದ ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ಭಾವಿಸಿತ್ತು. ಅಲ್ಲದೆ, ರೈತರ ಸಮಸ್ಯೆಗಳನ್ನು ಪರಿಹರಿಸುವ ವರೆಗೆ ಈ ಮಸೂದೆಯನ್ನು ಅಂಗೀಕರಿಸದಂತೆ ಕೇಂದ್ರ ಸರಕಾರದಲ್ಲಿ ಮನವಿ ಮಾಡಿತ್ತು. ಆದರೆ, ಬಿಜೆಪಿ ತನ್ನ ನಿರ್ಧಾರ ಬದಲಾಯಿಸಲು ಸಿದ್ಧ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮಸೂದೆಗೆ ತನ್ನ ಬೆಂಬಲ ಹಿಂದೆಗೆಯಿತು ಹಾಗೂ ಸಂಸತ್ತಿನಲ್ಲಿ ಮಸೂದೆ ವಿರುದ್ಧ ಮತ ಚಲಾಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News