​ಕೃಷಿ ಸುಧಾರಣೆಗೆ ಸಂಬಂಧಿಸಿದ ಎರಡು ಮಸೂದೆಗೆ ಲೋಕಸಭೆ ಒಪ್ಪಿಗೆ

Update: 2020-09-18 03:46 GMT

ಹೊಸದಿಲ್ಲಿ: ದೇಶದ ಕೃಷಿ ವ್ಯವಸ್ಥೆಯ ಸುಧಾರಣೆ ಹೆಸರಿನಲ್ಲಿ ಮಂಡಿಸಲಾದ ಕೃಷಿ ಮಾರುಕಟ್ಟೆ ಸುಧಾರಣೆ ಮತ್ತು ಗುತ್ತಿಗೆ ಕೃಷಿಗೆ ಸಂಬಂಧಿಸಿದ ಎರಡು ಮಸೂದೆಗಳಿಗೆ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆ ಲೋಕಸಭೆ ಒಪ್ಪಿಗೆ ನೀಡಿದೆ.

ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಗಳವಾರ ಆಂಗೀಕರಿಸಲಾಗಿತ್ತು. ರಾಜ್ಯಸಭೆಯಲ್ಲಿ ಈ ಮಸೂದೆಗಳು ಒಪ್ಪಿಗೆ ಪಡೆದಲ್ಲಿ, ಹಾಲಿ ಇರುವ ಸುಗ್ರೀವಾಜ್ಞೆಯ ಬದಲು ಹೊಸ ಕಾಯ್ದೆ ಜಾರಿಗೆ ಬರಲಿದೆ.

ಹಲವು ರಾಜಕೀಯ ಪಕ್ಷಗಳು ಹಾಗೂ ರೈತ ಸಂಘಟನೆಗಳು ಈ ಮಸೂದೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ಪ್ರಸ್ತಾವಿತ ಮಸೂದೆ ರೈತರಿಗೆ ಅಧಿಕ ಲಾಭ ತಂದುಕೊಡಲಿದೆ ಎನ್ನುವುದು ಸರ್ಕಾರದ ವಾದ.

ದೇಶದ ಒಟ್ಟು ಕೃಷಿಕರ ಪೈಕಿ ಶೇಕಡ 86ರಷ್ಟಿರುವ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ನೆರವಾಗುವುದು ಮಸೂದೆಯ ಉದ್ದೇಶ. ಇದುವರೆಗೆ ತಮ್ಮ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಪಡೆಯಲು ಚೌಕಾಸಿ ಮಾಡುವ ಅವಕಾಶವಾಗಲೀ, ಕೃಷಿ ಉತ್ಪಾದಕತೆಯನ್ನು ಸುಧಾರಿಸುವ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲಾಗಲೀ ಅವಕಾಶಗಳಿರಲಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ ಇನ್ನೊಂದೆಡೆ ಇದುವರೆಗೆ ತಮ್ಮ ಬಿಗಿಹಿಡಿತದ ಮೂಲಕ ರೈತರನ್ನು ದುರ್ಬಲಗೊಳಿಸುತ್ತಿದ್ದ ಪ್ರಭಾವಿ ಕಮಿಷನ್ ಏಜೆಂಟ್‌ಗಳ ಮೇಲೆ ಈ ಮಸೂದೆಗಳು ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ರೈತ ಸಮುದಾಯದಲ್ಲಿ ಇರುವ ಪ್ರಮುಖ ಆತಂಕವೆಂದರೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಕ್ರಮೇಣ ಕೊನೆಗೊಳ್ಳಲಿದೆ ಹಾಗೂ ಸರ್ಕಾರಿ ನಿಯಂತ್ರಣದ ಎಪಿಎಂಸಿಗಳು ಅಪ್ರಸ್ತುತವಾಗಲಿವೆ. ಗುತ್ತಿಗೆ ಕೃಷಿ ನಿಯಮಾವಳಿಯಂತೆ ಭೂಮಿಯ ಹಕ್ಕು ಕಳೆದುಕೊಳ್ಳುವ ಅಪಾಯವೂ ಇದ್ದು, ದೊಡ್ಡ ಕೃಷಿ ವಹಿವಾಟು ಸಂಸ್ಥೆಗಳು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸ್ಥಾಪಿಸುವುದರಿಂದ ಕೃಷಿ ಉತ್ಪನ್ನಗಳ ಬೆಲೆ ಕುಸಿಯುವ ಸಾಧ್ಯತೆಯೂ ಇದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ. ಗುತ್ತಿಗೆ ಕೃಷಿ ಕಾನೂನು ಬದ್ಧಗೊಳಿಸುವುದರಿಂದ ಗುತ್ತಿಗೆದಾರರು ರೈತರನ್ನು ಶೋಷಿಸುವ ಅಪಾಯವಿದೆ ಎಂಬ ಆತಂಕ ರೈತ ಸಮುದಾಯದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News