ಮಧುರೈ: ಪೊಲೀಸ್ ದೌರ್ಜನ್ಯದಿಂದ ಅಮಾಯಕ ಯುವಕ ಸಾವು ; ಕುಟುಂಬ ಆರೋಪ

Update: 2020-09-18 05:03 GMT

ಮಧುರೈ: ಪೊಲೀಸ್ ದೌರ್ಜನ್ಯದಿಂದ ಗ್ರಾಮದ ಯುವಕ ರಮೇಶ್ (19) ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮಧುರೈ ಜಿಲ್ಲೆಯ ವಳೈತೊಪ್ಪು ಗ್ರಾಮದ ನಾಗರಿಕರು ಗುರುವಾರ ಪ್ರತಿಭಟನೆ ನಡೆಸಿದರು. 

ಪೆರಿಯೂರು ತಾಲೂಕಿನ ಗುಡ್ಡದ ಬದಿಯಲ್ಲಿ ರಮೇಶ್ ಮೃತದೇಹ ಕುಟುಂಬ ಸದಸ್ಯರಿಗೆ ಸಿಕ್ಕಿತ್ತು. ಅಣ್ಣ ಇಡಯಕಣಿ ವಿರುದ್ಧ ದಾಖಲಾದ ಪ್ರಕರಣವೊಂದರ ಸಂಬಂಧ ರಮೇಶ್‌ನನ್ನು ಬುಧವಾರ ರಾತ್ರಿ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು ಎಂದು ಕುಟುಂಬ ಸದಸ್ಯರು ಆಪಾದಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ರಮೇಶ್‌ಗೆ ಚಿತ್ರಹಿಂಸೆ ನೀಡಲಾಗಿದೆ. ಆತನ ತಾಯಿ ಪಂಡಿಯಮ್ಮಾಳ್ ಮತ್ತು ಅಣ್ಣ ಸಂತೋಷ್ ಅವರನ್ನೂ ಪೊಲೀಸರು ಮನೆಯಲ್ಲೇ ಹೊಡೆದಿದ್ದಾರೆ ಎನ್ನುವುದು ಕುಟುಂಬದ ಆರೋಪ. ಸಾತಪುರ ಪೊಲೀಸ್ ಇನ್‌ಸ್ಪೆಕ್ಟರ್ ಜಯಕಣ್ಣನ್ ಅವರನ್ನು ದೂರಿನಲ್ಲಿ ಹೆಸರಿಸಲಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಪಟ್ಟುಹಿಡಿದರು. ಇಡಯಕಣಿ ವಿರುದ್ಧದ ಪ್ರಕರಣದಲ್ಲಿ ಜಯಕಣ್ಣನ್ ತನಿಖಾಧಿಕಾರಿ ರಮೇಶ್‌ನನ್ನು ಸ್ಕೂಟರ್ ಹಾಗೂ ಮೊಬೈಲ್ ಸಹಿತ ಠಾಣೆಗೆ ಕರೆದೊಯ್ಯುವ ವೇಳೆ ಎಲ್ಲ ಮೂವರಿಗೂ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎನ್ನುವುದು ಕುಟುಂಬದ ದೂರು. ಪೆರಿಯೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಕೊಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರ (ದೌರ್ಜನ್ಯ ತಡೆ) ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ. ಮಧುರೈ ಎಸ್ಪಿ ಸುಜಿತ್ ಕುಮಾರ್ ಈ ಆರೋಪ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News