ಕೇಂದ್ರ ಸಚಿವೆ ಕೌರ್ ರಾಜೀನಾಮೆ: ಹರ್ಯಾಣದ ಬಿಜೆಪಿ ಮೈತ್ರಿಪಕ್ಷದ ನಾಯಕ ದುಷ್ಯಂತ್ ಚೌಟಾಲಗೆ ಒತ್ತಡ

Update: 2020-09-18 05:45 GMT

ಹೊಸದಿಲ್ಲಿ, ಸೆ.18: ಅಕಾಲಿದಳದ ಏಕೈಕ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಕೃಷಿ ಸುಧಾರಣೆಗೆ ಸಂಬಂಧಿಸಿದ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿರುವುದನ್ನು ಪ್ರತಿಭಟಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟಕ್ಕೆ ರಾಜೀನಾಮೆ ನೀಡಿದ ಬೆನ್ನಿಗೇ ಹರ್ಯಾಣದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಮೈತ್ರಿಪಕ್ಷ ದುಷ್ಯಂತ್ ಸಿಂಗ್ ಚೌಟಾಲರ ಜನನಾಯಕ ಜನತಾ ಪಕ್ಷದ(ಜೆಜೆಪಿ)ಮೇಲೆ ಭಾರೀ ಒತ್ತಡ ಬಿದ್ದಿದೆ.

ಕೌರ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಿಗೇ ಪ್ರತಿಪಕ್ಷ ಕಾಂಗ್ರೆಸ್ ಹರ್ಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಅವರ ಕಾಲೆಳೆದಿದೆ.

 "ದುಷ್ಯಂತ್ ಜಿ, ಹರ್‌ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆ ಬಳಿಕ ನೀವು ಕನಿಷ್ಠ ಉಪ ಮುಖ್ಯಮಂತ್ರಿ ಸ್ಥಾನಕ್ಕಾದರೂ ರಾಜೀನಾಮೆ ನೀಡಬೇಕು. ನೀವು ರೈತರಿಗಿಂತ ಹೆಚ್ಚಾಗಿ ಕುರ್ಚಿಗೆ ಅಂಟಿಕೊಂಡಿದ್ದೀರಿ'' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟಿಸಿದ್ದಾರೆ.

ಜೆಜೆಪಿ, ಬಿಜೆಪಿಯ ರೈತರಿಗೆ ಸಂಬಂಧಪಟ್ಟ ಮಸೂದೆಯನ್ನು ವಿರೋಧಿಸುತ್ತಾ ಬಂದಿದ್ದು, ಪಂಜಾಬ್ ಮೂಲದ ಅಕಾಲಿ ದಳ ಪಕ್ಷದೊಂದಿಗೆ ಹೆಚ್ಚಿನ ಸಾಮ್ಯತೆ ಹೊಂದಿದೆ. ಎರಡೂ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಬಲವಾಗಿವೆ.

ಹರ್ಯಾಣದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿ ಸರಕಾರದ ರಚನೆಯಲ್ಲಿ ಬಾದಲ್ ಕುಟುಂಬ ಪ್ರಮುಖ ಪಾತ್ರವಹಿಸಿದೆ ಎಂದು ನಂಬಲಾಗಿದೆ.

ರೈತರ ಆಂದೋಲನವು ದುಷ್ಯಂತ್ ಚೌಟಾಲರ ಜೆಜೆಪಿಯನ್ನು ಕಟ್ಟಿಹಾಕಿದೆ. ಅಕಾಲಿ ದಳದಂತೆ ಒಂದು ನಿಲುವನ್ನು ತೆಗೆದುಕೊಳ್ಳುವುದು ಒಂದು ಸವಾಲಾಗಿದೆ. ಜೆಜೆಪಿ ಕೃಷಿ ಸುಗ್ರೀವಾಜ್ಞೆಯನ್ನು ಬೆಂಬಲಿಸುತ್ತಿದೆ.ವಿಪಕ್ಷ ಕಾಂಗ್ರೆಸ್ ರೈತರ ದಾರಿ ತಪ್ಪಿಸುತ್ತಿದೆ ಎಂದು ಜೆಜೆಪಿ ಆರೋಪಿಸಿತ್ತು. ಪಂಜಾಬ್‌ನಲ್ಲಿ ರೈತರ ಆಕ್ರೋಶಕ್ಕೆ ಒಳಗಾಗಿ ತನ್ನ ನಿಲುವು ಬದಲಿಸುವ ಮೊದಲು ಅಕಾಲಿದಳ ಕೂಡ ಕೇಂದ್ರ ಸರಕಾರದ ಕೃಷಿ ಮಸೂದೆಯನ್ನು ಬೆಂಬಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News