ಬಿಹಾರ ಚುನಾವಣೆ: 115 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಜೆಡಿಯು ಉತ್ಸುಕ

Update: 2020-09-18 07:06 GMT

   ಪಾಟ್ನಾ,ಸೆ.18: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಸಂಯುಕ್ತ ಜನತಾದಳ(ಜೆಡಿಯು)115 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿದೆ.ಮತ್ತೊಂದಡೆ ಮೈತ್ರಿ ಪಕ್ಷ ಬಿಜೆಪಿಗೆ 128 ಸೀಟುಗಳನ್ನು ಬಿಟ್ಟುಕೊಡಲಿದ್ದು,ಅದು ತನ್ನ ಕೋಟಾದಿಂದ ಎಲ್‌ಜೆಪಿಗೆ ಅವಕಾಶ ನೀಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಯು ಹಾಗೂ ಬಿಜೆಪಿ ಪಕ್ಷಗಳು ಎಲ್‌ಜೆಪಿಯ ಆಕ್ರಮಣಕಾರಿ ನಿಲುವಿನ ಮಧ್ಯೆ ಸೀಟು ಹಂಚಿಕೆ ಸೂತ್ರವನ್ನು ಎಚ್ಚರಿಕೆಯಿಂದ ನಿಭಾಯಿಸುತ್ತಿದೆ.

"ಪಕ್ಷವು 115 ಸೀಟುಗಳಲ್ಲಿ ಸ್ಪರ್ಧಿಸಲು ಹೆಚ್ಚು ಒತ್ತು ನೀಡಲಿದೆ. 2010ರಲ್ಲಿ ಕೇವಲ ಜೆಡಿಯು ಹಾಗೂ ಬಿಜೆಪಿ ಮಾತ್ರ ಇದ್ದವು. ಆಗ ನಮ್ಮಲ್ಲಿ ಸೀಟು ಹಂಚಿಕೆ ವಿವಾದ ಇರಲಿಲ್ಲ. 2015ರ ಅಸೆಂಬ್ಲಿ ಚುನಾವಣೆಯಲ್ಲಿ ಮಹಾ ಮೈತ್ರಿಕೂಟದ ಭಾಗವಾದ ಬಳಿಕ 101 ಸೀಟುಗಳಲ್ಲಿ ಸ್ಪರ್ಧಿಸಿದ್ದೆವು. ಇದೀಗ ನಾವು ಮತ್ತೊಮ್ಮೆ ಎನ್‌ಡಿಎ ಭಾಗವಾಗಿದ್ದು, ಹಿರಿಯ ಪಾಲುದಾರ ಪಕ್ಷವಾಗಿ 115 ಸೀಟುಗಳಿಗಾಗಿ ಒತ್ತಾಯಿಸಲಿದ್ದೇವೆ. ಬಿಜೆಪಿ ಪಕ್ಷ ಎಲ್‌ಜೆಪಿಯನ್ನು ನೋಡಿಕೊಳ್ಳಬೇಕಾಗಿದೆ. ನಾವು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮಿ ಮೋರ್ಚಾ ಪಕ್ಷದ ಸೀಟು ಹಂಚಬೇಕಾಗಿದೆ'' ಎಂದು ಜೆಡಿಯು ಸದಸ್ಯರೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಜೆಡಿಯು 71 ಶಾಸಕರನ್ನು ಹೊಂದಿದ್ದರೆ, ಬಿಜೆಪಿಯಲ್ಲಿ 53 ಶಾಸಕರಿದ್ದಾರೆ. 2010ರಲ್ಲಿ ನಡೆದಿದ್ದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಯು ಹಾಗೂ ಬಿಜೆಪಿ ಕ್ರಮವಾಗಿ 141 ಹಾಗೂ 102 ಸೀಟುಗಳಲ್ಲಿ ಸ್ಪರ್ಧಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News