ಸಾಫ್ಟ್ ವೇರ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಕಳೆದುಕೊಂಡ 66 ಲಕ್ಷ ‘ವೈಟ್ ಕಾಲರ್’ ಉದ್ಯೋಗಿಗಳು

Update: 2020-09-18 18:13 GMT

ಹೊಸದಿಲ್ಲಿ, ಸೆ. 18: ಮಾರ್ಚ್ ಅಂತ್ಯದಲ್ಲಿ ದೇಶದಲ್ಲಿ ಕಟ್ಟು ನಿಟ್ಟಾದ ಲಾಕ್‌ಡೌನ್ ಹೇರಿದ ಬಳಿಕ ಭಾರತದ ಔಪಚಾರಿಕ ವಲಯದಲ್ಲಿ ನಿರುದ್ಯೋಗ ತೀವ್ರವಾಗಿ ಏರುತ್ತಿದೆ.

ಮೇ ಹಾಗೂ ಆಗಸ್ಟ್ ನಡುವೆ ಸುಮಾರು 66 ಲಕ್ಷ ಬಿಳಿ ಕಾಲರಿನ ವೃತ್ತಿಪರರು (ಡಬ್ಲ್ಯುಸಿಎಫ್) ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿಎಂಐಇಯ ಕನ್ಸೂಮರ್ ಪಿರಮಿಡ್ಸ್ ಹೌಸ್‌ಹೋಲ್ಡ್ ಸರ್ವೇ (ಸಿಪಿಎಚ್‌ಎಸ್)ಯ 20ನೇ ಸಮೀಕ್ಷೆ ಬಹಿರಂಗಗೊಳಿಸಿದೆ.

ಕೊರೋನ ಸಾಂಕ್ರಾಮಿಕ ರೋಗದಿಂದ ತೊಂದರೆಗೊಳಗಾದ ವೇತನ ಪಡೆಯುವ ಎಲ್ಲ ಉದ್ಯೋಗಿಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಗಳಯ‌, ವೈದ್ಯರು, ಅಧ್ಯಾಪಕರು, ಅಕೌಂಟೆಂಟ್ಸ್ ಹಾಗೂ ವಿಶ್ಲೇಷಕರಂತಹ ಬಿಳಿ ಕಾಲರಿನ ವೃತ್ತಿಪರರು ಅತಿ ಹೆಚ್ಚು ಉದ್ಯೋಗ ನಷ್ಟದಿಂದ ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಈ ಬಿಳಿ ಕಾಲರಿನ ವೃತ್ತಿಪರರಲ್ಲಿ ಅರ್ಹ ಸ್ವ-ಉದ್ಯೋಗ ಹೊಂದಿದ ವೃತ್ತಿಪರ ಉದ್ಯಮಿಗಳು ಒಳಗೊಂಡಿಲ್ಲ ಎಂದು ಸಿಎಂಐಇ ಸ್ಪಷ್ಟಪಡಿಸಿದೆ.

ಭಾರತದಲ್ಲಿ 2019 ಮೇ-ಆಗಸ್ಟ್‌ನಲ್ಲಿ ಇಂತಹ ವೃತ್ತಿಪರ ಉದ್ಯೋಗಿಗಳಲ್ಲಿ ಉದ್ಯೋಗವು 1.88 ಕೋಟಿಗೆ ಏರಿತ್ತು. ಆದರೆ, ಈ ಸಂಖ್ಯೆ 2020 ಜನವರಿ- ಎಪ್ರಿಲ್‌ನಲ್ಲಿ ಕ್ರಮೇಣ 1.81 ಕೋಟಿಗೆ ಇಳಿಯಿತು.

  2020 ಮೇ-ಆಗಸ್ಟ್‌ನಲ್ಲಿ ಬಿಳಿ ಕಾಲರ್ ವೃತ್ತಿಪರರ ಉದ್ಯೋಗವು 1.22 ಕೋಟಿಗೆ ಇಳಿಯಿತು ಎಂದು ಇತ್ತೀಚೆಗಿನ ಸಮೀಕ್ಷೆ ಬಹಿರಂಗಗೊಳಿಸಿದೆ. 2016ರ ಬಳಿಕ ಬಿಳಿ ಕಾಲರಿನ ವೃತ್ತಿಪರರ ಉದ್ಯೋಗದಲ್ಲಿ ಅತಿ ಹೆಚ್ಚು ಇಳಿಕೆಯಾಗಿರುವುದು ಈ ವರ್ಷ ಎಂದು ಸಮೀಕ್ಷೆ ಗುರುತಿಸಿದೆ.

2016 ಜನವರಿ-ಎಪ್ರಿಲ್‌ನಲ್ಲಿ ಅಂದಾಜು 1.25 ಕೋಟಿ ಬಿಳಿ ಕಾಲರಿನ ವೃತ್ತಿಪರರು ಉದ್ಯೋಗ ಪಡೆದುಕೊಂಡಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮ ಉದ್ಯೋಗದ ಮೂಲಕ ಅವರು ಪಡೆದ ಎಲ್ಲವನ್ನೂ ಲಾಕ್‌ಡೌನ್ ಸಂದರ್ಭ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ ಸಮೀಕ್ಷೆ ತಿಳಿಸಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಿಳಿ ಕಾಲರಿನ ವೃತ್ತಿಪರರ ಉದ್ಯೋಗ 66 ಲಕ್ಷಕ್ಕೆ ಇಳಿಕೆಯಾಗಿದೆ. ಎಲ್ಲ ವೇತನ ಪಡೆಯುವ ಉದ್ಯೋಗಿಗಳಲ್ಲಿ ವರ್ಷದಿಂದ ವರ್ಷಕ್ಕೆ ಅತಿ ಹೆಚ್ಚು ಉದ್ಯೋಗ ನಷ್ಟವಾಗಿರುವುದು ಈ ವರ್ಷ ಎಂದು ಸಮೀಕ್ಷೆ ಹೇಳಿದೆ.

ಕಟ್ಟುನಿಟ್ಟಿನ ಲಾಕ್‌ಡೌನ್ ತಿಂಗಳುಗಳಲ್ಲಿ ಕೈಗಾರಿಕೆ ಕಾರ್ಮಿಕರು ಕೂಡ ತೀವ್ರವಾಗಿ ತೊಂದರೆಗೆ ಒಳಗಾದರು. ಬಿಳಿ ಕಾಲರಿನ ವೃತ್ತಿಪರರ ಬಳಿಕ ಅತಿ ಹೆಚ್ಚು ಉದ್ಯೋಗ ಕಳೆದುಕೊಂಡವರು ಕೈಗಾರಿಕೆ ಕಾರ್ಮಿಕರು ಎಂದು ಸಿಎಂಐಇ ಸಮೀಕ್ಷೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News