ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಔಟ್ !

Update: 2020-09-18 16:54 GMT

ಹೊಸದಿಲ್ಲಿ, ಸೆ. 18: ಗೂಗಲ್ ತನ್ನ ಪ್ಲೇ ಸ್ಟೋರ್‌ ನಿಂದ ಪೇಟಿಎಂ ಆ್ಯಪ್ ಅನ್ನು ತೆಗೆದು ಹಾಕಿದೆ. ಆದರೆ, ವೆಲ್ತ್ ಮ್ಯಾನೇಜ್‌ ಮೆಂಟ್ ಆ್ಯಪ್, ಪೇಟಿಎಂ ಮನಿ, ಮರ್ಚಂಟ್ ಆ್ಯಪ್, ಪೇಟಿಎಂ ಫಾರ್ ಬ್ಯುಸಿನಸ್ ಹಾಗೂ ಪೇ ಟಿಎಂ ಇನ್‌ಸೈಡರ್‌ನಂತಹ ಇತರ ಅಪ್ಲಿಕೇಶನ್‌ಗಳನ್ನು ಮುಂದುವರಿಸಿದೆ.

ಇದಕ್ಕೆ ವಿವರಣೆಯಾಗಿ ಗೂಗಲ್, ತನ್ನ ವೇದಿಕೆಯಲ್ಲಿ ಯಾವುದೇ ಜೂಜಿನ ಆ್ಯಪ್ ಅನ್ನು ಅನುಮೋದಿಸುವುದಿಲ್ಲ ಎಂದು ಹೇಳಿದೆ. ಅಲ್ಲದೆ ಬ್ಲಾಗ್‌ನಲ್ಲಿ, ‘‘ಭಾರತದಲ್ಲಿ ನಮ್ಮ ಜೂಜಿನ ಆಟದ ನೀತಿಯನ್ನು ಅರ್ಥ ಮಾಡಿಕೊಳ್ಳಿ’’ ಎಂಬ ಪೋಸ್ಟ್ ಹಾಕಿದೆ.

 “ನಮ್ಮ ಗ್ರಾಹಕರಿಗೆ ಸುರಕ್ಷಿತ ಅನುಭವ ಒದಗಿಸಲು ಗೂಗಲ್ ಪ್ಲೇಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಡೆವಲಪರ್ಸ್‌ಗಳಿಗೆ ಸುಸ್ಥಿರ ವ್ಯವಹಾರ ರೂಪಿಸಲು ಅಗತ್ಯವಾದ ವೇದಿಕೆ ಹಾಗೂ ಸಾಧನಗಳನ್ನು ನೀಡುತ್ತದೆ. ನಮ್ಮ ಎಲ್ಲ ಪಾಲುದಾರರ ಉತ್ತಮಿಕೆ ಪರಿಗಣಿಸಿ, ಗುರಿಯನ್ನು ಗಮನದಲ್ಲಿರಿಸಿಕೊಂಡು ಜಾಗತಿಕ ನೀತಿಯನ್ನು ರೂಪಿಸಲಾಗಿದೆ” ಎಂದು ಗೂಗಲ್ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೇಟಿಎಂ, ‘‘ಪೇಟಿಎಂ ಆ್ಯಂಡ್ರಾಯ್ಡಾ ಆ್ಯಪ್ ಹೊಸ ಡೌನ್‌ಲೋಡ್ ಅಥವಾ ಅಪ್ ಡೇಟ್ ‌ಗಳಿಗೆ ಗೂಗಲ್ ಪ್ಲೇಸ್ಟೋರ್ ‌ನಲ್ಲಿ ತಾತ್ಕಾಲಿಕವಾಗಿ ಲಭ್ಯವಿಲ್ಲ’’ ಎಂದು ಹೇಳಿದೆ.

‘‘ಅದು ಶೀಘ್ರದಲ್ಲಿ ಲಭ್ಯವಾಗಲಿದೆ. ಅನಂತರ ನೀವು ನಿಮ್ಮ ಪೇಟಿಎಂ ಆ್ಯಪ್ ಅನ್ನು ಎಂದಿನಂತೆ ಬಳಸುವುದನ್ನು ಮುಂದುವರಿಸಬಹುದು. ನಿಮ್ಮ ಎಲ್ಲ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದೆ’’ ಎಂದು ಹೇಳಿದೆ.

ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಂ ಆ್ಯಪ್ ಡೌನ್‌ಲೋಡ್ ಮಾಡುವ ಸಂದರ್ಭ ಎರರ್ ತೋರಿಸುತ್ತಿದೆ. ‘‘ಕ್ಷಮಿಸಿ, ವಿನಂತಿಸಿದ ಯುಆರ್‌ಎಲ್ ಈ ಸರ್ವರ್‌ನಲ್ಲಿ ಲಭ್ಯವಿಲ್ಲ’’ ಎಂಬ ಸಂದೇಶ ಬರುತ್ತಿದೆ. ಇದರ ಅರ್ಥ ಇನ್ನು ಮುಂದೆ ಆ್ಯಂಡ್ರಾಯ್ಡ್ ಬಳಕೆದಾರರು ಪೇಟಿಎಂ ಆ್ಯಪ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ.

ಕೋಟ್ಯಾಂತರ ಮಂದಿ ಬಳಕೆದಾರರು ಡೌನ್‌ಲೋಡ್ ಮಾಡುತ್ತಿರುವ ಹಾಗೂ ಭಾರತದಲ್ಲಿ 5 ಕೋಟಿ ಜನರು ಸಕ್ರಿಯವಾಗಿ ಬಳಸುತ್ತಿರುವ ಪೇಟಿಎಂ ಆ್ಯಪ್ ಅನ್ನು ತೆಗೆದು ಹಾಕಿರುವುದಕ್ಕೆ ನಿರ್ದಿಷ್ಟ ಕಾರಣವನ್ನು ಗೂಗಲ್ ಇದುವರೆಗೆ ಬಹಿರಂಗಗೊಳಿಸಿಲ್ಲ.

ಡ್ರೀಮ್ 11ರಂತಹ ಸ್ಫೋರ್ಟ್ಸ್ ಬೆಟ್ಟಿಂಗ್ ಅನ್ನು ಸುಗಮಗೊಳಿಸುವ ಅನಿಯಂತ್ರಿತ ಜೂಜಿನ ಆ್ಯಪ್‌ಗಳು ಹಾಗೂ ಆನ್‌ಲೈನ್ ಕ್ಯಾಸಿನೋಗೆ ಗೂಗಲ್ ನಿಷೇಧ ವಿಧಿಸಿದೆ. ಪೇಟಿಎಂನಿಂದ ತನ್ನ ಆ್ಯಪ್‌ನಲ್ಲಿ ಫ್ಯಾಂಟಸಿ ಸ್ಫೋರ್ಟ್ ಸೇವೆಯನ್ನು ಪ್ರಚಾರ ಮಾಡುತ್ತಿದೆ. ಇದೇ ಕಾರಣಕ್ಕಾಗಿ ಪೇಟಿಎಂನ ಫ್ಯಾಂಟಸಿ ಸೇವೆ-ಪೇಟಿಎಂ ಫಸ್ಟ್ ಗೇಮ್ಸ್ ಅನ್ನು ಕೂಡ ಪ್ಲೇಸ್ಟೋರ್‌ನಿಂದ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News