ಕೊರೋನ ಸೋಂಕು ಪ್ರಕರಣದ ಸಂಖ್ಯೆ ಏರಿಕೆ: ಲೋಕಸಭೆ ಅಧಿವೇಶನ ಬುಧವಾರ ಮೊಟಕು ?

Update: 2020-09-19 17:30 GMT

ಹೊಸದಿಲ್ಲಿ, ಸೆ. 19: ಸಂಸದೀಯ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಲೋಕಸಭೆಯ ಮುಂಗಾರು ಅಧಿವೇಶನವನ್ನು ಹಲವು ದಿನಗಳು ಮೊಟಕುಗೊಳಿಸಲು ಕೇಂದ್ರ ಸರಕಾರ ಶನಿವಾರ ನಿರ್ಧರಿಸಿದೆ. ಅಧಿವೇಶನದಲ್ಲಿ ಪಾಲ್ಗೊಂಡ ಮೂವರಿಗೆ ಕಳೆದ ವಾರ ಆರಂಭದಲ್ಲಿ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಂಸದರ ಸುರಕ್ಷೆ ಬಗ್ಗೆ ಕೇಂದ್ರ ಕಾಳಜಿ ವಹಿಸಿದೆ.

ಈ ಹಿಂದೆ ಕೇಂದ್ರ ಸರಕಾರ ಒಮ್ಮತ ರೂಪಿಸುವ ಪ್ರಯತ್ನವಾಗಿ ಪ್ರತಿಪಕ್ಷಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿತ್ತು. ಈ ಸಂದರ್ಭ ಹಲವು ಪ್ರತಿಪಕ್ಷಗಳು ಅಧಿವೇಶನವನ್ನು ಕಡಿತಗೊಳಿಸುವುದಕ್ಕೆ ಒಲವು ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಲೋಕಸಭೆಯ ಅಧಿವೇಶನ ಮುಂದಿನ ವಾರ ಬುಧವಾರ ಅಂತಿಮಗೊಳ್ಳುವ ಸಾಧ್ಯತೆ ಇದೆ. ರಾಜ್ಯ ಸಭೆ ಕೂಡ ಇದನ್ನು ಅನುಸರಿಸುವ ಸಾಧ್ಯತೆ ಇದೆ. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವುದಕ್ಕಿಂತ ಮುನ್ನ ನಡೆಸಲಾದ ಕಡ್ಡಾಯ ಕೊರೋನ ಪರೀಕ್ಷೆಯಲ್ಲಿ ಲೋಕಸಭೆಯ 17 ಸದಸ್ಯರು ಹಾಗೂ ರಾಜ್ಯ ಸಭೆಯ 8 ಸದಸ್ಯರಿಗೆ ಸೊಂಕು ದೃಢಪಟ್ಟಿತ್ತು. ಕೊರೋನ ಸೋಂಕಿಗೆ ಒಳಗಾದ ಲೋಕಸಭಾ ಸಂಸದರಲ್ಲಿ ಬಿಜೆಪಿಯ ಅತಿ ಹೆಚ್ಚು 12 ಸಂಸದರು ಇದ್ದಾರೆ. ವೈಎಸ್‌ಐರ್ ಕಾಂಗ್ರೆಸ್‌ನ ಇಬ್ಬರು ಸಂಸದರು, ಶಿವಸೇನೆ, ಡಿಎಂಕೆ ಹಾಗೂ ಆರ್‌ಎಲ್‌ಪಿಯ ತಲಾ ಒಬ್ಬರು ಸಂಸದರು ಇದ್ದಾರೆ.

ಅಧಿವೇಶನ ಆರಂಭವಾಗುವ ಮುನ್ನ ಕೊರೋನ ನೆಗೆಟಿವ್ (ಕೊರೋನ ಸೋಂಕು ಇಲ್ಲದಿರುವುದು) ಇದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಹ್ಲಾದ್ ಪಟೇಲ್‌ಗೆ ಈ ವಾರದ ಆರಂಭದಲ್ಲಿ ಕೊರೋನ ಪಾಸಿಟಿವ್ ವರದಿ ಬಂದಿತ್ತು. ಶುಕ್ರವಾರ ಬಿಜೆಪಿಯ ರಾಜ್ಯಸಭೆ ಸದಸ್ಯ ವಿನಯ್ ಸಹಸ್ರಬುದ್ಧೆ ಕೊರೋನ ಸೋಂಕಿಗೆ ಒಳಗಾಗಿದ್ದರು. ಸಂಸದರಲ್ಲಿ ಕೊರೋನ ಸೋಂಕು ಹರಡುವುದನ್ನು ತಡೆಯಲು ಸಂಸತ್ತಿನ ಅಧಿಕಾರಿಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ, ಯಾವುದೇ ಅಪಾಯವನ್ನು ಎದುರು ಹಾಕಿಕೊಳ್ಳಲು ಕೇಂದ್ರ ಸರಕಾರ ಬಯಸುತ್ತಿಲ್ಲ. ಸಂಸತ್ತಿನ ಈ ಮುಂಗಾರು ಅಧಿವೇಶನ ಪೂರ್ಣಗೊಳ್ಳುವ ಮೊದಲು ಸರಕಾರ 11 ವಿಧೇಯಕಗಳನ್ನು ಅಂಗೀಕರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News