ದೊಡ್ಡ ಪರದೆಯ ಮೇಲೆ ವಾಸ್ತವದ ವರದಿ

Update: 2020-09-19 19:30 GMT

ಯಾರಾದರೂ ಕಲ್ಲಿಕೋಟೆ ವಿಮಾನ ದುರಂತವನ್ನು ಒಂದು ಸಿನೆಮಾ ಆಗಿ ಮಾಡುವುದಾದಲ್ಲಿ ಆ ಸಿನೆಮಾ ರಕ್ಷಣಾ ಕಾರ್ಯಾಚರಣೆಯನ್ನಷ್ಟೇ ದಾಖಲಿಸುವುದಲ್ಲದೆ ಮಾನವೀಯತೆ, ಅನುಕಂಪ, ಅಳಿವಿನ ಅಂಚಿಗೆ ಬಂದಿರುವ ಒಂದು ಪ್ರಪಂಚದಲ್ಲಿ ಅದು ಜನರಿಗೆ ಮಾನವೀಯತೆಯನ್ನು ಜ್ಞಾಪಿಸುವ ಕೆಲಸವನ್ನು ಮಾಡಬೇಕಾಗುತ್ತದೆ.


ಇತ್ತೀಚೆಗೆ ಕಲ್ಲಿಕೋಟೆಯಲ್ಲಿ ಸಂಭವಿಸಿದ ವಿಮಾನ ಅಪಘಾತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಚರ್ಚಿಸಬೇಕಾಗಿದ್ದ ರೀತಿಯಲ್ಲೇ ಆ ದುರ್ಘಟನೆ ದೇಶದ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟಿತು. ವಿಮಾನದ ಪೈಲಟ್ ಹಾಗೂ ಸಹ ಪೈಲಟ್ ಸಹಿತ ಇಪ್ಪತ್ತು ಮಂದಿ ಆ ದುರಂತದಲ್ಲಿ ಸಾವನ್ನಪ್ಪಿದರು. ದುರಂತ ಜನರನ್ನು ಹೆಚ್ಚು ತೀವ್ರವಾಗಿ ಯಾಕೆ ಕಾಡಿತು ಎಂದರೆ ಕೊರೋನದ ಈ ಸಂಕಷ್ಟ ಕಾಲದಲ್ಲಿ ಮನೆಗೆ ಮರಳಲು ಕಾಯುತ್ತಿದ್ದ ಭಾರತೀಯರು ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಮಾಧ್ಯಮಗಳು ವಿಮಾನ ಅಪಘಾತದ ವಿವರಗಳಿಗೆ ಗಮನ ನೀಡಿದಂತೆ ದುರಂತ ನಡೆದ ಕೂಡಲೇ ವಿಮಾನದಲ್ಲಿದ್ದವರನ್ನು ರಕ್ಷಿಸಲು ಧಾವಿಸಿ ಬಹುಸಂಖ್ಯೆಯಲ್ಲಿ ಬಂದ ಮಲಪ್ಪುರಂನ ನಿವಾಸಿಗಳಿಗೆ ಕೂಡ ಸಾಕಷ್ಟು ಮಹತ್ವ ನೀಡಿದವು. ಆ ನಿವಾಸಿಗಳಲ್ಲಿ ಹಲವರು ವಿಮಾನ ಅಪಘಾತದ ಸಿಡಿಲಿನಂತಹ ಸದ್ದನ್ನು ಕೇಳಿ ತಕ್ಷಣ ಅಪಘಾತ ನಡೆದ ಸ್ಥಳಕ್ಕೆ ಓಡಿ ಬಂದಿದ್ದರು. ಅವರು ಅಲ್ಲಿಗೆ ಧಾವಿಸಿದ್ದಷ್ಟೇ ಅಲ್ಲದೆ ತಮ್ಮ ಮಿತ್ರರಿಗೆ ಸುದ್ದಿ ತಿಳಿಸಿದರು, ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಆಕ್ಟಿವೇಟ್ ಮಾಡಿದರು, ಜನರ ನೆರವನ್ನು ಸಂಘಟಿಸಿ ಗಾಯಾಳು ಪ್ರಯಾಣಿಕರನ್ನು ತಮ್ಮದೇ ವಾಹನಗಳಲ್ಲಿ ಆಸ್ಪತ್ರೆಗಳಿಗೆ ಸಾಗಿಸಿದರು. ಇಷ್ಟೇ ಅಲ್ಲದೆ ಗಾಯಾಳು ಪ್ರಯಾಣಿಕರಿಗೆ ರಕ್ತದಾನ ಮಾಡಲು ತಾಳ್ಮೆಯಿಂದ ಕ್ಯೂನಲ್ಲಿ ಕಾದು ನಿಂತರು. ಸ್ಥಳೀಯ ಜನರ ಭಾಗವಹಿಸುವಿಕೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಬಹಳ ಬೇಗನೆ ಸಾಧ್ಯವಾಯಿತು. ಮಾಧ್ಯಮಗಳಲ್ಲಿ ಕಾಯಿಲೆಯ, ಸಾವು ಹಾಗೂ ಬಂಧನದ ಹೃದಯ ಹಿಂಡುವ ವರದಿಗಳು ಪ್ರಮುಖವಾಗಿರುವಾಗ ಸ್ಥಳೀಯ ನಿವಾಸಿಗಳು ಮೆರೆದ ಈ ಮಾನವೀಯತೆ ಕಾರ್ಗತ್ತಲಲ್ಲಿ ಭರವಸೆಯ ಒಂದು ಕೋಲ್ಮಿಂಚು. ರಾಜಕೀಯ ಕಾರಣಗಳಿಗಾಗಿ ಮಾಧ್ಯಮದ ಕೆಲವು ವರ್ಗಗಳಲ್ಲಿ ಭಾರೀ ನಿಂದನೆಗೆ, ಟೀಕೆಗೆ ಗುರಿಯಾದದ್ದು ಇದೇ ಮಲಪ್ಪುರಂ ಎಂಬುದನ್ನು ನಾವು ಮರೆಯಬಾರದು.

ಇತ್ತೀಚಿನ ತಿಂಗಳುಗಳಲ್ಲಿ ಹಲವು ಮಲಯಾಳಂ ಸಿನೆಮಾಗಳು ಕೇರಳದಲ್ಲಿ ನಡೆದ ಸಮಕಾಲೀನ ಘಟನೆಗಳನ್ನು ಕೇಂದ್ರೀಕರಿಸಿಕೊಂಡಿವೆ. ಕೊರೋನ ಸಾಂಕ್ರಾಮಿಕ ಹರಡುವ ಆರಂಭದ ವೇಳೆ ‘ವೈರಸ್’ ರಾಷ್ಟ್ರಾದ್ಯಂತ ಜನರ ಗಮನ ಸೆಳೆಯಿತು. ಕೇರಳ ಸರಕಾರ ನಿಫಾಹ್ ಹರಡುವಿಕೆಯನ್ನು ತಡೆಗಟ್ಟಲು ನಡೆಸಿದ ಅದ್ಭುತ ಪ್ರಯತ್ನಗಳನ್ನು ಈ ಸಿನೆಮಾ ದಾಖಲಿಸುತ್ತದೆ. ಯಾವುದೇ ಒಂದು ನಿರ್ದಿಷ್ಟ ಘಟನೆಯನ್ನು ಆಧರಿಸದೆ ಇರುವ ಸಿನೆಮಾವಾದರೂ, ‘ಟ್ರಾನ್ಸ್’ ಕುರುಡು ನಂಬಿಕೆಯ ವಿರುದ್ಧ ಜನರನ್ನು ಎಚ್ಚರಿಸುತ್ತದೆ. ಸಿನೆಮಾದಲ್ಲಿ ಅಳವಡಿಸಲಾಗಿರುವ ಹಲವು ಘಟನೆಗಳು ಅನುಮಾನಾಸ್ಪದ ‘ದೇವ ಮಾನವರು’ ಮತ್ತು ಅವರ ಹುಸಿ ಪವಾಡಗಳು ಮಾಧ್ಯಮಗಳಲ್ಲಿ ಆಗಾಗ ವರದಿಯಾಗು ತ್ತಲೇ ಇರುತ್ತವೆ. ಹೀಗೆ ಇತ್ತೀಚೆಗೆ ನಡೆದ ಮುಖಾ ಮುಖಿಗಳನ್ನು ದೊಡ್ಡ ಪರದೆಯ ಮೇಲೆ ಸಿನೆಮಾ ಆಗಿ ತೋರಿಸುವ ಒಂದು ಬೆಳವಣಿಗೆ, ಟ್ರೆಂಡ್ ಈಗ ಕಾಣಿಸುತ್ತಿದೆ. ಇದು ಮಲಯಾಳಂ ಸಿನೆಮಾ ರಂಗಕ್ಕೆ ಮಾತ್ರ ವಿಶಿಷ್ಟವಲ್ಲವಾದರೂ ಮಲಯಾಳಂ ಸಿನೆಮಾ ಉದ್ಯಮದಷ್ಟು ಪರಿಣಾಮಕಾರಿಯಾಗಿ ಇದನ್ನು ಮಾಡುವ ಸಿನೆಮಾ ಪರಂಪರೆಗಳು ವಿರಳವೆನ್ನಬಹುದು. ಇತರ ಯಾವುದೇ ಕಲಾಕೃತಿಯ ಹಾಗೆ ಒಂದು ಘಟನೆಯನ್ನು ಸಿನೆಮಾ ಆಗಿ ರೂಪಾಂತರಿಸುವಾಗ ಕಲಾತ್ಮಕ ತಂತ್ರಗಳು, ಕೈಚಳಕಗಳು ಅಲ್ಲಿ ಕಾಣಿಸಿಕೊಳ್ಳದೆ ಇರುವುದಿಲ್ಲ.

ಅದೇನಿದ್ದರೂ, ಚಿತ್ರ ಆಧಾರಿತವಾದ ಒಂದು ಮಾಧ್ಯಮವಾಗಿ ಸಿನೆಮಾ ಬಹಳ ವ್ಯಾಪಕವಾಗಿ ಜನರನ್ನು ತಲುಪುತ್ತದೆ ಎಂಬ ಬಗ್ಗೆ ಎರಡು ಮಾತಿಲ್ಲ. ಸಿನೆಮಾವನ್ನು ಯಾವಾಗಲೂ ಉಪಯೋಗದ ದೃಷ್ಟಿಯಿಂದಲೇ ನೋಡಬೇಕಾಗಿಲ್ಲವಾದರೂ, ಸಿನೆಮಾಗಳ ಮೂಲಕ ಜನರು ತಮ್ಮ ಭೂತ ಮತ್ತು ವರ್ತಮಾನವನ್ನು ಸ್ಮಾರಕವಾಗಿಸಲು ಪ್ರಯತ್ನಿಸುವ ಭಾರತದಂತಹ ಒಂದು ದೇಶದಲ್ಲಿ ಸಿನೆಮಾಕ್ಕೆ ಅದು ವಹಿಸಬೇಕಾದ ಒಂದು ಪಾತ್ರ ಹಾಗೂ ಜವಾಬ್ದಾರಿ ಇದೆ. ಸಿನೆಮಾ ತಮ್ಮ ಧಾರ್ಮಿಕ ಭಾವನೆಗಳನ್ನು ಚುಚ್ಚಿದಾಗ ಜನರು ತಮ್ಮ ಅಸಮಾಧಾನ ಹಾಗೂ ಕೋಪವನ್ನು ವ್ಯಕ್ತಪಡಿಸುತ್ತಾರೆ ಎಂಬುದು ಕೂಡ ನಿಜ. ಇದು ಭಾರತದ ಸಿನೆಮಾ ವೀಕ್ಷಕರನ್ನು ಸ್ವಲ್ಪವಿಚಿತ್ರ ವಿಶಿಷ್ಟ ರೀತಿಯ ವೀಕ್ಷಕರನ್ನಾಗಿ ಮಾಡುತ್ತದೆ.

ಒಂದು ಸಿನೆಮಾದ ಉದ್ದೇಶವೇನು? ಎನ್ನುವುದನ್ನು ಅದನ್ನು ಮಾಡುವಾತನೇ ನಿರ್ಧರಿಸಬೇಕು. ಆದರೆ ನಾವು ಬದುಕುತ್ತಿರುವ ಕಾಲ ಮತ್ತು ದೇಶದಲ್ಲಿ ಇರುವ ಸಾಮಾಜಿಕ, ರಾಜಕೀಯ ಸ್ಥಿತಿ ಕೂಡ ಈ ಉದ್ದೇಶಗಳಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತದೆ. ಇದು ಒಂದು ಸಿನೆಮಾದ ನಿರ್ಮಾಣವನ್ನು ಇನ್ನಷ್ಟು ಹೆಚ್ಚು ಜವಾಬ್ದಾರಿಯ ಒಂದು ಕಾಯಕವಾಗಿ ಮಾಡುತ್ತದೆ. ಉದಾಹರಣೆಗೆ ಯಾರಾದರೂ ಕಲ್ಲಿಕೋಟೆ ವಿಮಾನ ದುರಂತವನ್ನು ಒಂದು ಸಿನೆಮಾ ಆಗಿ ಮಾಡುವುದಾದಲ್ಲಿ ಆ ಸಿನೆಮಾ ರಕ್ಷಣಾ ಕಾರ್ಯಾಚರಣೆಯನ್ನಷ್ಟೇ ದಾಖಲಿಸುವುದಲ್ಲದೆ ಮಾನವೀಯತೆ, ಅನುಕಂಪ, ಅಳಿವಿನ ಅಂಚಿಗೆ ಬಂದಿರುವ ಒಂದು ಪ್ರಪಂಚದಲ್ಲಿ ಅದು ಜನರಿಗೆ ಮಾನವೀಯತೆಯನ್ನು ಜ್ಞಾಪಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಸಮಾಜವು ಭಾರೀ ವಿಭಜನೆಗೊಳಗಾಗಿರುವ ಹಾಗೂ ಸಂಘರ್ಷ, ಸಂಕಷ್ಟದಿಂದ ಜರ್ಝರಿತವಾಗಿರುವ ಒಂದು ಕಾಲದಲ್ಲಿ ಸಿನೆಮಾ ರಚನಾತ್ಮಕವಾಗಿ, ಧನಾತ್ಮಕವಾಗಿ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಬಲ್ಲುದು ಮತ್ತು ಅತ್ಯಂತ ಮುಖ್ಯವಾಗಿ ಸಾಮೂಹಿಕ ಅನುಕಂಪ, ಕರುಣೆ, ದಯೆ ಹಾಗೂ ಸಾರ್ವಜನಿಕ ಕ್ರಿಯೆಯ ಮಹತ್ವವನ್ನು ನಮಗೆ ಜ್ಞಾಪಿಸಬಲ್ಲದು.

(ಲೇಖಕರು ಪೂನಾದ ಪ್ಲೇಮ್ ವಿವಿಯಲ್ಲಿ ಬೋಧಕರಾಗಿದ್ದಾರೆ.)

ಕೃಪೆ: thehindu

Writer - ಕುನಾಲ್ ರೇ

contributor

Editor - ಕುನಾಲ್ ರೇ

contributor

Similar News