ಡೆಲ್ಲಿ ಕ್ಯಾಪಿಟಲ್ಸ್ ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಸವಾಲು

Update: 2020-09-20 04:10 GMT

 ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡ ದುಬೈ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರವಿವಾರ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 13ನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಯ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ್ನು ಎದುರಿಸಲಿದೆ.

     ಉಭಯ ತಂಡಗಳು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಡೆಲ್ಲಿ ತಂಡ 10 ಪಂದ್ಯಗಳಲ್ಲಿ ಜಯ ಗಳಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ 14ರಲ್ಲಿ ಜಯಗಳಿಸಿದೆ. ಐಪಿಎಲ್‌ನ 12ನೇ ಆವೃತ್ತಿಯಲ್ಲಿ. ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಯಾಣ ಎಲಿಮಿನೇಟರ್ ಸುತ್ತಿನಲ್ಲಿ ಕೊನೆಗೊಂಡಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

    ಈ ವರ್ಷ, ಯಾವುದೇ ತಂಡಗಳು ತವರಿನಲ್ಲಿ ಆಡಿ ಲಾಭ ಅವಕಾಶವನ್ನು ಹೊಂದಿರುವುದಿಲ್ಲ. ಹೀಗಿದ್ದರೂ ಡೆಲ್ಲಿ ತಂಡ ಗೆಲುವಿನ ನಿರೀಕ್ಷೆಯಲ್ಲಿದೆ. ಡೆಲ್ಲಿ ತಂಡವನ್ನು ನಾಯಕರಾಗಿ ಮುಂಬೈನ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕನ್ನಡಿಗ ಲೋಕೇಶ್ ರಾಹುಲ್ ನಾಯಕರಾಗಿದ್ದಾರೆ.

 ರಾಹುಲ್ ಈ ಪಂದ್ಯದಲ್ಲಿ ನಾಯಕ, ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರು ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಜೊತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ.

ರಾಹುಲ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯ ಹೊರತಾಗಿಯೂ ನಿಕೋಲಸ್ ಪೂರನ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಆಗಿಯೂ ಕಾರ್ಯನಿರ್ವಹಿಸಬೇಕಾಗಿದೆ. ಭಾರತದ ಮಾಜಿ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿರುವುದು ಇನ್ನೊಂದು ವಿಶೇಷ. ಕನ್ನಡಿಗರಿಬ್ಬರು ಪಂಜಾಬ್ ತಂಡವನ್ನು ಬಲಿಷ್ಠವಾಗಿ ಕಟ್ಟಲು ನೋಡುತ್ತಿದ್ದಾರೆ.

   ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬ್ಯಾಟಿಂಗ್‌ನಲ್ಲಿ ಮಾಯಾಂಕ್ ಅಗರ್ವಾಲ್, ಗ್ಲೆನ್ ಮ್ಯಾಕ್ಸ್‌ವೆಲ್, ಮಂದೀಪ್ ಸಿಂಗ್, ಸರ್ಫರಾಝ್ ಖಾನ್, ಗೇಲ್ ಮತ್ತು ರಾಹುಲ್ ಅವರನ್ನು ಅವಲಂಬಿಸಲಿದೆ. ಆದರೆ ಡೆಲ್ಲಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಅಯ್ಯರ್, ಪೃಥ್ವಿ ಶಾ ಮತ್ತು ಶಿಖರ್ ಧವನ್, ಶಿಮ್ರಾನ್ ಹೆಟ್ಮಿಯರ್ ಮತ್ತು ರಿಷಭ್ ಪಂತ್ ಇದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್‌ನ ಬೌಲಿಂಗ್ ವಿಭಾಗವನ್ನು ಮುಹಮ್ಮದ್ ಶಮಿ, ಮುಜೀಬ್ ಉರ್ ರಹ್ಮಾನ್ , ಇಶಾನ್ ಪೊರೆಲ್, ಕ್ರಿಸ್ ಜೋರ್ಡಾನ್ ಮತ್ತು ಕೃಷ್ಣಪ್ಪ ಗೌತಮ್ ಮುನ್ನಡೆಸಲಿದ್ದಾರೆ.

 ಡೆಲ್ಲಿ ಕ್ಯಾಪಿಟಲ್ಸ್‌ನ ಬೌಲಿಂಗ್ ವಿಭಾಗದಲ್ಲಿ ಕಾಗಿಸೊ ರಬಡಾ, ಇಶಾಂತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ಕೀಮೊ ಪಾಲ್ ಸೇರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News