ಐಎಂಎ ಕೋವಿಡ್ ಹುತಾತ್ಮರ ಪಟ್ಟಿಯಲ್ಲಿ ಗುಜರಾತ್‌ಗೆ ಮೂರನೇ ಸ್ಥಾನ

Update: 2020-09-20 05:20 GMT

 ಅಹಮದಾಬಾದ್, ಸೆ.20: ತಮಿಳುನಾಡು ಹಾಗೂ ಆಂಧ್ರಪ್ರದೇಶದ ಬಳಿಕ ಗುಜರಾತ್ ಕೋವಿಡ್-19ನಿಂದಾಗಿ ಅತ್ಯಂತ ಹೆಚ್ಚು ವೈದ್ಯರುಗಳನ್ನು ಕಳೆದುಕೊಂಡ ದೇಶದ ಮೂರನೇ ರಾಜ್ಯವಾಗಿದೆ. ಭಾರತೀಯ ವೈದ್ಯಕೀಯ ಸಂಘು(ಐಎಂಎ)ಬಿಡುಗಡೆ ಮಾಡಿರುವ ಅಂಕಿ-ಅಂಶದಿಂದ ಈ ವಿಚಾರ ಬೆಳಕಿಗೆ ಬಂದಿದೆ.

ಸೆಪ್ಟಂಬರ್ 10ರ ತನಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಸುಮಾರು 38 ವೈದ್ಯರುಗಳು ಕೋವಿಡ್-19ನಿಂದ ಮೃತಪಟ್ಟಿದ್ದಾರೆ. ಶುಕ್ರವಾರ ವಾಪಿಯ 34ರ ವಯಸ್ಸಿನ ಮಕ್ಕಳ ವೈದ್ಯರೊಬ್ಬರು ಕೋವಿಡ್-19ಗೆ ಬಲಿಯಾಗಿದ್ದರು.

 ಇಡೀ ದೇಶದಲ್ಲಿ ಕೋವಿಡ್‌ನಿಂದ ಹೆಚ್ಚು ಜನರನ್ನು ಕಳೆದುಕೊಂಡ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್‌ಗೆ 8ನೇ ಸ್ಥಾನದಲ್ಲಿದ್ದು,ಈ ರಾಜ್ಯದಲ್ಲಿ ಈ ತನಕ ಕೋವಿಡ್‌ಗೆ 3,286 ಜನರು ಮೃತಪಟ್ಟಿದ್ದಾರೆ. ಈ ತನಕ ಗುಜರಾತ್‌ನಲ್ಲಿ 1.22 ಲಕ್ಷ ಕೋವಿಡ್ ಕೇಸ್‌ಗಳು ವರದಿಯಾಗಿದೆ.

ಗುಜರಾತ್‌ನಲ್ಲಿ 34 ಹಾಗೂ 82 ವಯಸ್ಸಿನ ನಡುವಿನ ವೈದ್ಯರುಗಳು ಕೋವಿಡ್-19ನಿಂದಾಗಿ ಮೃತಪಟ್ಟಿದ್ದಾರೆ ಎನ್ನುವುದು ಶುಕ್ರವಾರ ಐಎಂಎ ಬಿಡುಗಡೆಗೊಳಿಸಿರುವ ಕೋವಿಡ್‌ನಿಂದ ಹುತಾತ್ಮರಾದ ವೈದ್ಯರ ಪಟ್ಟಿಯಲ್ಲಿ ಬಹಿರಂಗವಾಗಿದೆ. 38ರ ವೈದ್ಯರ ಪೈಕಿ 29 ವೈದ್ಯರು 50-70ರ ವಯಸ್ಸಿನವರು.

ವರದಿಯ ಪ್ರಕಾರ ಅಹ್ಮದಾಬಾದ್ ನಗರವೊಂದರಲ್ಲೇ 19 ವೈದ್ಯರು ಮೃತಪಟ್ಟಿದ್ದು, ಸೂರತ್‌ನಲ್ಲಿ ಐವರು ವೈದ್ಯರು ಮೃತಪಟ್ಟಿದ್ದಾರೆ.

ಪಟ್ಟಿಯಲ್ಲಿರುವ ಹೆಚ್ಚಿನ ವೈದ್ಯರು ಖಾಸಗಿ ವೈದ್ಯರಾಗಿದ್ದರೆ,ಅವರಲ್ಲ್ಲಿ ಒಬ್ಬರು ಅಮ್ರೆಲಿಯ ಡಾ.ಪಂಕಜ್ ಜಾದವ್ ಸರಕಾರಿ ವೈದ್ಯಕೀಯ ಅಧಿಕಾರಿಯಾಗಿದ್ದರು.ಕಳೆದ 20 ವರ್ಷಗಳಿಂದ ಅಮ್ರೆಲಿ ಜನರಲ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ 49 ವರ್ಷದ ಡಾ.ಜಾಧವ್ ಕೋವಿಡ್‌ನಿಂದ ತಾಯಿ ತೀರಿಕೊಂಡು ಒಂದು ವಾರದ ನಂತರ ಜೂ.22ರಂದು ಸೋಂಕಿಗೆ ಬಲಿಯಾದರು.ಸಾವನ್ನಪ್ಪಿದ ಹೆಚ್ಚಿನ ವೈದ್ಯರು ಸಾಮಾನ್ಯ ವೈದ್ಯರು ಅಥವಾ ಮಕ್ಕಳ ವೈದ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News