ವಿಪಕ್ಷಗಳ ಗದ್ದಲದ ನಡುವೆ ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅಂಗೀಕಾರ

Update: 2020-09-20 13:41 GMT

ಹೊಸದಿಲ್ಲಿ, ಸೆ.20: ಪ್ರತಿಪಕ್ಷಗಳ ತೀವ್ರ ವಿರೋಧ, ಪ್ರತಿಭಟನೆಯ ಮಧ್ಯೆಯೇ ರಾಜ್ಯಸಭೆಯಲ್ಲಿ ಕೃಷಿಗೆ ಸಂಬಂಧಿಸಿದ ಎರಡು ಮಸೂದೆಗಳಿಗೆ ಧ್ವನಿಮತದ ಅಂಗೀಕಾರ ಪಡೆಯಲು ಕೇಂದ್ರ ಸರಕಾರ ಯಶಸ್ವಿಯಾಗಿದೆ.

ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಹಾಗೂ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತು ರೈತರ ಒಪ್ಪಂದ(ಸಬಲೀಕರಣ ಮತ್ತು ಸಂರಕ್ಷಣೆ) ಮಸೂದೆ 2020ಕ್ಕೆ ರವಿವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿದೆ. ರಾಜ್ಯಸಭೆಯಲ್ಲಿ ಸೂಕ್ತ ಬಹುಮತವಿಲ್ಲದ ಕೇಂದ್ರ ಸರಕಾರ, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮಸೂದೆಗೆ ಅಂಗೀಕಾರ ಗಳಿಸಿಕೊಂಡಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

 ರವಿವಾರ ಬೆಳಿಗ್ಗೆ ರಾಜ್ಯಸಭೆಯಲ್ಲಿ ಮಸೂದೆಗಳನ್ನು ಮಂಡಿಸಿದ್ದ ಸರಕಾರ, ಇವು ಚಾರಿತ್ರಿಕ ಮಸೂದೆಗಳಾಗಿದ್ದು ರೈತರ ಬದುಕಿನಲ್ಲಿ ಬದಲಾವಣೆ ತರಲಿದೆ ಎಂದು ಹೇಳಿತ್ತು. ಆದರೆ ಕೃಷಿ ಮಸೂದೆಯ ಬಗ್ಗೆ ಇನ್ನಷ್ಟು ಚರ್ಚೆಯ ಅಗತ್ಯವಿದ್ದು ಅವನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಪ್ರತಿಪಕ್ಷಗಳ ನಿರ್ಣಯ ತಿರಸ್ಕೃತವಾಗಿದ್ದು ಮಸೂದೆಗೆ ಧ್ವನಿಮತದಿಂದ ಅಂಗೀಕಾರ ಪಡೆಯಲು ಸರಕಾರ ನಿರ್ಧರಿಸಿದೆ ಎಂದು ರಾಜ್ಯಸಭೆಯ ಉಪಾಧ್ಯಕ್ಷರು ಘೋಷಿಸಿದಾಗ ಸದನ ಗದ್ದಲದ ಮಡುವಾಯಿತು. ತಾವು ಸದನದಲ್ಲೇ ಉಪಸ್ಥಿತರಿದ್ದು ಭೌತಿಕ ಮತದಾನದ ಮೂಲ ಮಸೂದೆಗೆ ಅಂಗೀಕಾರ ಪಡೆಯಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು. ಆದರೆ ಇದಕ್ಕೆ ಉಪಾಧ್ಯಕ್ಷರು ನಿರಾಕರಿಸಿದಾಗ ಸದನದ ಬಾವಿಗೆ ನುಗ್ಗಿ ನಿಯಮಾವಳಿ ಪುಸ್ತಕವನ್ನು ಹರಿದು ಬಿಸಾಕಿದರಲ್ಲದೆ ಉಪಾಧ್ಯಕ್ಷರ ಮೈಕ್ರೋಫೋನ್ ಕಿತ್ತುಕೊಳ್ಳಲು ಯತ್ನಿಸಿದರು. ಪ್ರತಿಪಕ್ಷಗಳ ಗದ್ದಲ, ಘೋಷಣೆ, ಪ್ರತಿಭಟನೆ ಹೆಚ್ಚಿದಾಗ ಸದನದ ಕಲಾಪವನ್ನು 10 ನಿಮಿಷದ ಮಟ್ಟಿಗೆ ಮುಂದೂಡಲಾಯಿತು.

ಸದನ ಮರುಸಮಾವೇಶಗೊಂಡಾಗಲೂ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿಯಿತು. ಗದ್ದಲದ ಮಧ್ಯೆಯೇ, ಮಸೂದೆಗೆ ಧ್ವನಿಮತದ ಅಂಗೀಕಾರ ದೊರಕಿದೆ ಎಂದು ಉಪಾಧ್ಯಕ್ಷರು ಘೋಷಿಸಿದರು. ಉಪಾಧ್ಯಕ್ಷರ ಸತತ ಆಕ್ಷೇಪವನ್ನು ಕಡೆಗಣಿಸಿ ಪ್ರತಿಪಕ್ಷದ ಸಂಸದರು ರಾಜ್ಯಸಭೆಯ ಕಲಾಪವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ದಾಖಲಿಸಿಕೊಂಡರು. ಸರಕಾರ ಬಳಿ ಸೂಕ್ತ ಬಹುಮತವಿಲ್ಲ. ಇದು ಇಲ್ಲಿಗೇ ಮುಗಿಯದು. ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ. ಸಂಸತ್ತಿನ ಎಲ್ಲಾ ನಿಯಮಗಳನ್ನೂ ಅವರು ಮುರಿಯುವ ಮೂಲಕ ವಂಚಿಸಿದ್ದಾರೆ. ದೇಶದ ಜನತೆಗೆ ಈ ವಂಚನೆ ತಿಳಿಯಬಾರದೆಂದು ರಾಜ್ಯಸಭೆಯ ಟಿವಿಯನ್ನು ಸೆನ್ಸರ್ ಮಾಡಲಾಗಿದೆ. ದೇಶದ ಜನತೆಗೆ ಸುಳ್ಳು ಹೇಳಬೇಡಿ, ನಮ್ಮಲ್ಲಿ ಸಾಕ್ಷ್ಯವಿದೆ ಎಂದು ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಹೇಳಿದರು.

ಸಂಸತ್ತಿನ ಒಳಗಡೆ ಮಹಾಭಾರತ ಭುಗಿಲೆದ್ದಿದೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಹೇಳಿದರು. ಕೃಷಿ ಮಸೂದೆಗಳಿಂದ ರೈತರ ಆದಾಯಕ್ಕೆ ತಡೆಯಾಗಲಿದೆ ಎಂದು ಪ್ರತಿಪಕ್ಷಗಳು ಹಾಗೂ ರೈತರಿಂದ(ವಿಶೇಷವಾಗಿ ಉತ್ತರಭಾರತದ ರೈತರಿಂದ) ಭಾರೀ ವಿರೋಧ ವ್ಯಕ್ತವಾಗಿದೆ. ಆದರೆ ರೈತರ ಉತ್ಪನ್ನ ನೇರವಾಗಿ ಬೃಹತ್ ಮಾರಾಟಗಾರರ ಕೈ ಸೇರುವುದರಿಂದ ರೈತರಿಗೆ ಪ್ರಯೋಜನವಾಗಲಿದೆ ಎಂಬುದು ಸರಕಾರ ನಿಲುವಾಗಿದೆ.

ಕೃಷಿ ಇತಿಹಾಸದಲ್ಲಿ ಐತಿಹಾಸಿಕ ಕ್ಷಣ: ಪ್ರಧಾನಿ ಸಂಸತ್ತಿನಲ್ಲಿ ಕೃಷಿ ಮಸೂದೆಗೆ ಅಂಗೀಕಾರ ದೊರಕಿರುವುದು ಭಾರತೀಯ ಕೃಷಿ ಇತಿಹಾಸದಲ್ಲೇ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತೀಯ ಕೃಷಿ ಇತಿಹಾಸದಲ್ಲಿ ಒಂದು ಐತಿಹಾಸಿಕ ಕ್ಷಣ. ಕೋಟ್ಯಾಂತರ ರೈತರನ್ನು ಸಶಕ್ತಗೊಳಿಸುವ ಹಾಗೂ ಕೃಷಿ ಕ್ಷೇತ್ರದ ಸಂಪೂರ್ಣ ಪರಿವರ್ತನೆಗೆ ಕಾರಣವಾಗುವ ಪ್ರಮುಖ ಮಸೂದೆಗಳಿಗೆ ಸಂಸತ್ತಿನಲ್ಲಿ ಅಂಗೀಕಾರ ದೊರಕಿದ್ದಕ್ಕೆ ನಮ್ಮ ಕಠಿಣ ಪರಿಶ್ರಮಿ ರೈತರನ್ನು ಅಭಿನಂದಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News