‘ಇಗ್ನೊಬೆಲ್’ ಪ್ರಶಸ್ತಿಗೆ ಪಾತ್ರರಾದ ದೇಶದ ಎರಡನೇ ಪ್ರಧಾನಿ ಮೋದಿ

Update: 2020-09-20 17:11 GMT

ಹೊಸದಿಲ್ಲಿ,ಸೆ.20: ವೈದ್ಯಕೀಯ ಶಿಕ್ಷಣಕ್ಕೆ ತನ್ನ ‘ಕೊಡುಗೆ ’ಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಇಗ್ನೊಬೆಲ್’ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. ಬ್ರೆಝಿಲ್, ಬ್ರಿಟನ್, ಮೆಕ್ಸಿಕೋ, ಬೆಲಾರೂಸ್, ಅಮೆರಿಕ, ಟರ್ಕಿ, ರಷ್ಯಾ ಮತ್ತು ತುರ್ಕಮೆನಿಸ್ತಾನ್ ಸರಕಾರಗಳ ಮುಖ್ಯಸ್ಥರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 ವಿಶೇಷವಾಗಿ ಹಾಸ್ಯದ ಧಾಟಿಯುಳ್ಳ ವರದಿಗಳು ಮತ್ತು ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ಚರ್ಚೆಗಳನ್ನು ಪ್ರಕಟಿಸುವ ‘ಅನಲ್ಸ್ ಆಫ್ ಇಂಪ್ರೊಬೇಬಲ್ ರೀಸರ್ಚ್ ’ಹೆಸರಿನ ಮ್ಯಾಗಝಿನ್ ಈ ವಿಡಂಬನಾತ್ಮಕ ಪ್ರಶಸ್ತಿಗಳನ್ನು ಪ್ರದಾನಿಸುತ್ತದೆ.

ಪ್ರಶಸ್ತಿಯ ಹೆಸರು ‘ಇಗ್ನೊಬೆಲ್ ’ ಪ್ರತಿಷ್ಠಿತ ನೊಬೆಲ್ ಅನ್ನೇ ಹೋಲುತ್ತಿದ್ದು, ಅದನ್ನು ಅಣಕಿಸುತ್ತಿದೆ. ಸಾಮಾನ್ಯವಾಗಿ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಹಾರ್ವರ್ಡ್ ವಿವಿಯ ಸ್ಯಾಂಡರ್ಸ್ ಥಿಯೇಟರ್‌ನಲ್ಲಿ ಭವ್ಯ, ಆದರೆ ವಿಲಕ್ಷಣ ಸಮಾರಂಭದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರು ಪ್ರದಾನಿಸುತ್ತಾರೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಲು ಪುರಸ್ಕೃತರಿಗೆ ಸರಿಯಾಗಿ 60 ಸೆಕೆಂಡ್‌ಗಳ ಕಾಲಾವಕಾಶವಿರುತ್ತದೆ. ಈ ಬಗ್ಗೆ ನಿಗಾ ವಹಿಸಲು ಸಿಡುಕುಮೋರೆಯ ಎಂಟರ ಹರೆಯದ ಬಾಲಕಿಯನ್ನು ನಿಯೋಜಿಸಲಾಗುತ್ತದೆ. 60 ಸೆಕೆಂಡ್‌ಗಳ ನಿಯಮ ಉಲ್ಲಂಘನೆಯಾದಾಗ ಈ ಬಾಲಕಿ ವೇದಿಕೆಗೆ ಬಂದು ‘ದಯವಿಟ್ಟು ನಿಲ್ಲಿಸಿ,ನಿಮ್ಮ ಭಾಷಣ ನನಗೆ ಬೇಸರ ಹುಟ್ಟಿಸಿದೆ ’ಎಂದು ಹೇಳುತ್ತಾಳೆ. ಸಾವಿರಕ್ಕೂ ಅಧಿಕ ವೀಕ್ಷಕರು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ ಮತ್ತು ವೇದಿಕೆಯ ಮೇಲೆ ಪೇಪರ್ ಬಾಣಗಳನ್ನು ತೂರಲು ಅವರಿಗೆ ಅವಕಾಶ ನೀಡಲಾಗುತ್ತದೆ. ಈ ಕಾರ್ಯಕ್ರಮವನ್ನು ಇಂಟರ್ನೆಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಆದರೆ ಈ ವರ್ಷ ಕೋವಿಡ್ ಬಿಕ್ಕಟ್ಟಿನಿಂದಾಗಿ ಇಡೀ ಕಾರ್ಯಕ್ರಮ ಆನ್‌ಲೈನ್‌ನಲ್ಲಿ ನಡೆದಿದೆ.

ಮೊದಲ ‘ಇಗ್ನೊಬೆಲ್’ ಪ್ರಶಸ್ತಿಗಳನ್ನು 1991ರಲ್ಲಿ ಪ್ರದಾನಿಸಲಾಗಿತ್ತು.

 ಮೋದಿ ಈ ಪ್ರಶಸ್ತಿಗೆ ಪಾತ್ರರಾದ ಮೊದಲ ವ್ಯಕ್ತಿಯಲ್ಲ. ಅಣ್ವಸ್ತ್ರದ ‘ಆಕ್ರಮಣಕಾರಿ ಶಾಂತಿಯುತ ’ನಿಷ್ಕ್ರಿಯತೆಗಾಗಿ 1998ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಆ ವರ್ಷದ ಶಾಂತಿ ಪ್ರಶಸ್ತಿಯನ್ನು ನೀಡಲಾಗಿತ್ತು. ವಯಸ್ಕರು ಆಗಾಗ್ಗೆ ಮೂಗಿನಲ್ಲಿ ಬೆರಳು ತೂರಿಸುತ್ತಿರುತ್ತಾರೆ ಎನ್ನುವುದನ್ನು ಕಂಡು ಹಿಡಿದಿದ್ದಕ್ಕಾಗಿ ಚಿತ್ತರಂಜನ ಅಂದ್ರಾದೆ ಮತ್ತು ಬಿ.ಎಸ್.ಶ್ರೀಹರಿ ಅವರಿಗೆ 2001ರಲ್ಲಿ ಸಾರ್ವಜನಿಕ ಆರೋಗ್ಯ ಪ್ರಶಸ್ತಿಯನ್ನು, ಆನೆಗಳ ಮೇಲ್ಮೈ ವಿಸ್ತೀರ್ಣವನ್ನು ಅಂದಾಜಿಸಿದ್ದಕ್ಕೆ ಕೆ.ಪಿ.ಶ್ರೀಕುಮಾರ ಮತ್ತು ಜಿ.ನಿರ್ಮಲನ್ ಅವರಿಗೆ 2002ರಲ್ಲಿ ಗಣಿತ ಪ್ರಶಸ್ತಿಯನ್ನು ಮತ್ತು ಮೃತ ವ್ಯಕ್ತಿಗಳ ಸಂಘವನ್ನು ಸೃಷ್ಟಿಸಿದ್ದಕ್ಕಾಗಿ ಲಾಲ್ ಬಿಹಾರಿಯವರಿಗೆ 2003ರ ಶಾಂತಿ ಪ್ರಶಸ್ತಿಯನ್ನು ನೀಡಲಾಗಿತ್ತು. ಭಾರತದೊಂದಿಗೆ ಗುರುತಿಸಿಕೊಂಡಿರುವ ಇನ್ನೂ ಹಲವರು ಇಗ್ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News