ಕೃಷಿ ಮಸೂದೆ: ರೈತರ ಬೆಂಬಲಕ್ಕೆ ನಿಂತ ಪಂಜಾಬ್ ಗಾಯಕರು

Update: 2020-09-20 15:50 GMT

ಹೊಸದಿಲ್ಲಿ, ಸೆ.20: ಕೃಷಿ ಮಸೂದೆಯ ವಿರುದ್ಧ ರೈತರ ಆಕ್ರೋಶಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಪಂಜಾಬ್‌ನ ಗಾಯಕರು ಧ್ವನಿಯಾಗಿದ್ದಾರೆ.

ಪಂಜಾಬ್‌ನ ಜನಪ್ರಿಯ ಗಾಯಕರಾದ ದಿಲ್ಜಿತ್ ದೊಸಾಂಜ್, ಜಸ್‌ಬೀರ್ ಜಸ್ಸಿ, ಹರ್ಭಜನ್ ಮಾನ್ ಮುಂತಾದವರು ಕೇಂದ್ರ ಸರಕಾರದ ಮಸೂದೆ ರೈತ ವಿರೋಧಿ ಎಂದು ಟೀಕಿಸಿದ್ದಾರೆ.

 ರೈತರು ದೇಶಕ್ಕೆ ಆಹಾರ ಬೆಳೆಯಬೇಕು ಎಂದು ನಿರೀಕ್ಷಿಸುತ್ತಿದ್ದೇವೆ. ಆದರೆ ತಮ್ಮ ಉತ್ಪನ್ನಗಳ ಬೆಲೆಯನ್ನು ಅವರೇಕೆ ನಿರ್ಧರಿಸಬಾರದು? ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿರ್ಧರಿಸಿಲ್ಲ. ತಮ್ಮ ಬೆಳೆಗಳನ್ನು ದಾಸ್ತಾನಿರಿಸಲು ಅವರಲ್ಲಿ ಗೋದಾಮುಗಳಿಲ್ಲ. ಈ ವಿಷಯದಲ್ಲಿ ರಾಜಕೀಯ ಬೇಡ. ಇದು ರೈತರ ಸಮಸ್ಯೆ. ರಾಜಕೀಯ ಭಿನ್ನಾಭಿಪ್ರಾಯ ಬದಿಗಿರಿಸಿ ದೇಶದ ಅನ್ನದಾತರ ಬಗ್ಗೆ ಯೋಚಿಸಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ದಿಲ್ಜಿತ್ ಟ್ವೀಟ್ ಮಾಡಿದ್ದಾರೆ.

ರೈತ ಕುಟುಂಬದಿಂದ ಬಂದ ಸುಷಾಂತ್ ಸಿಂಗ್ ನಿಧನಕ್ಕೆ ನ್ಯಾಯ ಬೇಕೆಂದು ಕೆಲವರು ಆಗ್ರಹಿಸುತ್ತಿದ್ದರು. ಈಗ ನಮಗೆಲ್ಲಾ ಅನ್ನ ಒದಗಿಸುತ್ತಿರುವ ರೈತರ ಋಣ ಸಂದಾಯಕ್ಕೆ ಮುಂದಾಗಬೇಕಿದೆ ಎಂದು ಗಾಯಕ ಜಸ್ಸಿ ಟ್ವೀಟ್ ಮಾಡಿದ್ದಾರೆ. ವದಂತಿಗಳನ್ನು ನಂಬಬೇಡಿ ಎಂಬ ಸರಕಾರದ ಮಾತುಗಳಲ್ಲಿ ವಿಶ್ವಾಸವಿಡಿ ಎಂದು ದಲೇರ್ ಮೆಹಂದಿ ಟ್ವೀಟ್ ಮಾಡಿದ್ದಾರೆ. ಖ್ಯಾತ ಗಾಯಕರಾದ ಜಿಪ್ಪಿ ಗ್ರೆವಾಲ್, ನಿಮ್ರತ್ ಖೈರ, ಆ್ಯಮಿ ವಿರ್ಕ್, ಕರಮ್‌ಜಿತ್ ಅನ್ಮೋಲ್, ಗುರ್‌ಪ್ರೀತ್ ಘುಗ್ಗಿ ‘ರೈತರನ್ನು ರಕ್ಷಿಸಿ ದೇಶ ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ರೈತರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News