ಆಫ್ರಿಕದ ಗಿಡಮೂಲಿಕೆ ಕೊರೋನಕ್ಕೆ ಔಷಧಿ?

Update: 2020-09-20 16:38 GMT

  ಬ್ರಾಝ್‌ವಿಲ್ಲೆ (ಕಾಂಗೊ),ಸೆ.20: ಕೊರೋನ ವೈರಸ್ ಮತ್ತಿತರ ಸಾಂಕ್ರಾಮಿಕ ರೋಗಗಳ ಸಂಭಾವ್ಯ ಚಿಕಿತ್ಸೆಗಾಗಿ ಆಫ್ರಿಕದ ಗಿಡಮೂಲಿಕೆ ಔಷಧಿಗಳ  ಪರೀಕ್ಷೆಯನ್ನು ನಡೆಸುವ ಕುರಿತಾದ ಶಿಷ್ಟಾಚಾರ ಸಂಹಿತೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ) ಶನಿವಾರ ಅನುಮೋದನೆ ನೀಡಿದೆ.

   ಕೋವಿಡ್-19 ಸೋಂಕಿಗೆ ಸೂಕ್ತ ಲಸಿಕೆ ಕಂಡುಹಿಡಿಯಲು ಈ ವರೆಗೆ ಸಾಧ್ಯವಾಗದೆ ಇರುವುದು, ಈ ರೀತಿಯ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಸಾಂಪ್ರದಾಯಿಕ ಔಷಧಿಗಳ ಬಳಕೆಯ ಸಾಧ್ಯತೆಯ ಬಗ್ಗೆ ವಿವಿಧ ರಾಷ್ಟ್ರಗಳು ಗಮನಹರಿಸುವಂತೆ ಮಾಡಿದೆ.

 ಕೋವಿಡ್-19 ಚಿಕಿತ್ಸೆಗಾಗಿ ಗಿಡಮೂಲಿಕೆ ಔಷಧಿಗಳ ಮೂರನೆ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುವ ಕುರಿತಾದ ಶಿಷ್ಟಾಚಾರದ ಸಂಹಿತೆಗೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹಾಗೂ ಇನ್ನೆರಡು ಸಂಸ್ಥೆಗಳ ಪರಿಣಿತರು ಅನುಮೋದನೆ ನೀಡಿದ್ದಾರೆ.

 ‘‘ ಒಂದು ವೇಳೆ ಕೋವಿಡ್-19 ಚಿಕಿತ್ಸೆಗೆ ಸಾಂಪ್ರದಾಯಿಕ ಔಷಧಿ ಉತ್ಪನ್ನವು ಸುರಕ್ಷಿತ, ಪರಿಣಾಮಕಾರಿ ಹಾಗೂ ಗುಣಮಟ್ಟದ ಖಾತರಿಯನ್ನು ಹೊಂದಿರುವುದು ದೃಢಪಟ್ಟಲ್ಲಿ ಅದನ್ನು ವಿಶ್ವ ಆರೋಗ್ಯ ಸಂಸ್ಥೆಯು ಅತ್ಯಂತ ತ್ವರಿತ ಹಾಗೂ ಬೃಹತ್ ಪ್ರಮಾಣದ ಸ್ಥಳೀಯ ಉತ್ಪಾದನೆಗೆ ಶಿಫಾರಸು ಮಾಡಲಿದೆ ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಪ್ರೊಸ್ಪರ್ ಟ್ಯುಮುಸಿಮ್ ತಿಳಿಸಿದ್ದಾರೆ.

   ಕೋವಿಡ್-19 ಚಿಕಿತ್ಸೆಗೆ ಸಾಂಪ್ರದಾಯಿಕ ಗಿಡಮೂಲಿಕೆಗಳ ಬಳಕೆ ಕುರಿತ ಕ್ಲಿನಿಕಲ್ ಟ್ರಯಲ್‌ಗೆ ರೋಗ ನಿಯಂತ್ರಣ ಹಾಗೂ ತಡೆಗಾಗಿನ ಆಫ್ರಿಕಾ ಕೇಂದ್ರ ಹಾಗೂ ಸಾಮಾಜಿಕ ವ್ಯವಹಾರಗಳ ಕುರಿತಾದ ಆಫ್ರಿಕ ಒಕ್ಕೂಟ ಆಯೋಗವು ಪಾಲುದಾರಿಕೆಯನ್ನು ಹೊಂದಿವೆ.

  ಪಶ್ಚಿಮ ಆಫ್ರಿಕಾದಲ್ಲಿ ಹಾವಳಿಯೆಬ್ಬಿಸಿದ ಎಬೋಲಾ ಸೋಂಕಿನ ಹಾಗೆ ಕೋವಿಡ್-19 ಸಾಂಕ್ರಾಮಿಕ ರೋಗವು, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕಾದ ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲಿದೆ ಹಾಗೂ ಸಾಂಪ್ರದಾಯಿಕ ಔಷಧಿಗಳ ಕುರಿತಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಉತ್ತೇಜನ ನೀಡಿದೆ ಎಂದು ಟ್ಯುಮುಸಿಮ್ ತಿಳಿಸಿದ್ದಾರೆ.

ಆದಾಗ್ಯೂ ಕೊರೋನ ವೈರಸ್‌ಸೋಂಕಿಗೆ ಪರಿಣಾಮಕಾರಿ ಔಷಧಿಯೆಂದು ಬಿಂಬಿಸಲಾಗುತ್ತಿರುವ ಮಡಗಾಸ್ಕರ್‌ನ ಪೇಯ ಕೋವಿಡ್-ಆರ್ಗಾನಿಕ್ಸ್ ಬಗ್ಗೆ ಅವರು ಯಾವುದೇ ಪ್ರಸ್ತಾವವನ್ನು ಮಾಡಿಲ್ಲ. ಕೋವಿಡ್-ಆರ್ಗಾನಿಕ್ಸ್ ಪೇಯವು, ಕೊರೋನ ಸೋಂಕಿಗೆ ದಿವ್ಯ ಔಷಧಿಯೆಂದು ಮಡಗಾಸ್ಕರ್ ಅಧ್ಯಕ್ಷ ಆ್ಯಂಡ್ರಿ ರ್ಯಾಜೊಲಿನಾ ಪ್ರತಿಪಾದಿಸಿದ್ದರು. ಈ ಪೇಯ ಮಡಗಾಸ್ಕರ್ ಸೇರಿದಂತೆ ಆಫ್ರಿಕ ಮತ್ತಿತರ ದೇಶಗಳಲ್ಲಿ ಭಾರೀ ಜನಪ್ರಿಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News