ಪ್ಲಿಸ್ಕೋವಾ, ಹಾಲೆಪ್ ಸೆಮಿಫೈನಲ್ ಗೆ

Update: 2020-09-20 17:49 GMT

ರೋಮ್, ಸೆ.20: ಅಗ್ರ ಶ್ರೇಯಾಂಕದ ಸಿಮೊನಾ ಹಾಲೆಪ್ ಹಾಗೂ ಹಾಲಿ ಚಾಂಪಿಯನ್ ಕರೊಲಿನಾ ಪ್ಲಿಸ್ಕೋವಾ ಇಟಾಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.

ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಪ್ಲಿಸ್ಕೋವಾ ಬೆಲ್ಜಿಯಂನ 11ನೇ ಶ್ರೇಯಾಂಕದ ಎಲಿಸ್ ಮೆರ್ಟೆನ್ಸ್‌ರನ್ನು 6-3, 3-6, 6-0 ಸೆಟ್‌ಗಳ ಅಂತರದಿಂದ ಮಣಿಸಿದರು.

ಕಝಕ್ ಎದುರಾಳಿ ಯುಲಿಯಾ ಪುಟಿನ್‌ಸೇವಾ 2-6, 0-2ರಿಂದ ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ನಿವೃತ್ತಿಯಾಗಿದ್ದು, ಹಾಲೆಪ್ ಸೆಮಿಫೈನಲ್‌ಗೆ ತೇರ್ಗಡೆಯಾದರು. ಇತ್ತೀಚೆಗೆ ಯುಎಸ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದ ವಿಕ್ಟೋರಿಯ ಅಝರೆಂಕಾರನ್ನು 3-6, 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ ಗಾರ್ಬೈನ್ ಮುಗುರುಝ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮುಂದಿನ ಸುತ್ತಿನಲ್ಲಿ ಸಿಮೊನಾ ಹಾಲೆಪ್‌ರನ್ನು ಎದುರಿಸಲಿದ್ದಾರೆ.

ಸ್ಪೇನ್ ಆಟಗಾರ್ತಿ ಮುಗುರುಝ ಮೂರು ಬಾರಿ ಇಟಾಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ. ಆದರೆ, ಈ ತನಕ ಫೈನಲ್‌ಗೆ ತಲುಪಲು ಸಫಲರಾಗಿಲ್ಲ. ಹಾಲೆಪ್ ಕೂಡ 2017 ಹಾಗೂ 2018ರಲ್ಲಿ ಫೈನಲ್‌ಗೆ ತಲುಪಿದ್ದರೂ ಸ್ವಿಟೋಲಿನಾಗೆ ಸೋಲುವ ಮೂಲಕ ಎರಡನೇ ಸ್ಥಾನ ಪಡೆದಿದ್ದರು. ಎರಡು ಬಾರಿಯ ಪ್ರಶಸ್ತಿ ವಿಜೇತೆ ಎಲಿನಾ ಸ್ವಿಟೋಲಿನಾ ಅವರು ಮಾರ್ಕೆಟಾ ವಂಡ್ರೋಸೋವಾ ವಿರುದ್ಧ 3-6, 0-6 ಸೆಟ್‌ಗಳ ಅಂತರದಿಂದ ಶರಣಾದರು.

ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ರನ್ನರ್ಸ್ ಅಪ್ ಆಗಿರುವ ಮಾರ್ಕೆಟಾ ಮುಂದಿನ ಸುತ್ತಿನಲ್ಲಿ ಕರೊಲಿನಾ ಪ್ಲಿಸ್ಕೋವಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News