ಉಪ ಸಭಾಪತಿ ಹರಿವಂಶ್ ವಿರುದ್ಧ ವಿಪಕ್ಷಗಳ ಅವಿಶ್ವಾಸ ನಿಲುವಳಿ ತಿರಸ್ಕರಿಸಿದ ವೆಂಕಯ್ಯ ನಾಯ್ಡು

Update: 2020-09-21 06:05 GMT

ಹೊಸದಿಲ್ಲಿ, ಸೆ.21:ಉಪ ಸಭಾಪತಿ ಹರಿವಂಶ್ ಎಲ್ಲ ನಿಯಮಗಳನ್ನು,ಸಂಸದೀಯ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ. ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ವಿವಿಧ ರಾಜಕೀಯ ಪಕ್ಷಗಳ ಸದಸ್ಯರಿಗೆೆ ಮಾತನಾಡಲು ಅವಕಾಶ ನೀಡಿಲ್ಲ. ಉಪಸಭಾಪತಿಯನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿಲುವಳಿಯನ್ನು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಸೋಮವಾರ ತಿರಸ್ಕರಿಸಿದರು.

ರವಿವಾರದ ಘಟನೆಯನ್ನು ತೀವ್ರವಾಗಿ ಖಂಡಿಸಿದ ನಾಯ್ಡು, "ನಿನ್ನೆ ನಡೆದ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಎಲ್ಲ ಸುರಕ್ಷಿತ ಅಂತರ ಹಾಗೂ ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಲಾಗಿತ್ತು. ಇದು ರಾಜ್ಯಸಭೆಗೆ ಕೆಟ್ಟ ದಿನ.ಉಪ ಸಭಾಪತಿಗೆ ದೈಹಿಕ ಬೆದರಿಕೆ ಹಾಕಲಾಗಿತ್ತು. ಅವರ ಯೋಗಕ್ಷೇಮದ ಬಗ್ಗೆ ನನಗೆ ಚಿಂತೆ ಕಾಡುತ್ತಿದೆ. ಇದು ಸದನದ ಘನತೆಗೆ ಮಾಡಿದ ಧಕ್ಕೆಯಾಗಿದೆ''ಎಂದು ನಾಯ್ಡು ಹೇಳಿದರು.

ವಿಪಕ್ಷಗಳು ಸಭಾಪತಿಯ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದಾಗ ಕಲಾಪವನ್ನು 20 ನಿಮಿಷಗಳ ಕಾಲ ಮುಂದೂಡಲಾಯಿತು. ಸದನ ಮತ್ತೆ ಆರಂಭವಾದ ಬಳಿಕ ಗದ್ದಲ ಮುಂದುವರಿದಾಗ ಇನ್ನೂ 30 ನಿಮಿಷ ಮುಂದೂಡಲಾಗಿದೆ.

ಸಂಸದೀಯ ವ್ಯವಹಾರ ಸಚಿವರು ಸದನದ ಉಳಿದ ಕಲಾಪಗಳಿಂದ ವಿಪಕ್ಷದ ಎಂಟು ಸದಸ್ಯರುಗಳನ್ನು ಅಮಾನತುಗೊಳಿಸಬೇಕೆಂದು ನಿಲುವಳಿ ಮಂಡಿಸಿದರು. ಸಭಾಪತಿ ನಾಯ್ಡು ನಿಲುವಳಿಯನ್ನು ಮತಕ್ಕೆ ಹಾಕಿದರು.ಧ್ವನಿ ಮತದಿಂದ ಇದನ್ನು ಅಂಗೀಕರಿಸಲಾಯಿತು.

ಅಮಾನತುಗೊಂಡ ಡೆರೆಕ್ ಒಬ್ರಿಯಾನ್ ಪ್ರತಿಭಟನೆ ಮುಂದುವರಿಸಿದಾಗ, ಡೆರೆಕ್ ಒಬ್ರಿಯಾನ್ ಸದನದಿಂದ ಹೊರಬೇಕೆಂದು ನಾನು ಆದೇಶಿಸುತ್ತೇನೆ ಎಂದು ನಾಯ್ಡು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News