ತನ್ನ ಚಿರಪರಿಚಿತ ರಾಜೀವ್ ಶರ್ಮಾನ ಕಾನೂನು ಬಾಹಿರ ಕೆಲಸ ಅಜಿತ್ ದೋವಲ್ ಗೆ ತಿಳಿದಿರಲಿಲ್ಲವೇ ?

Update: 2020-09-21 08:49 GMT
ಅಜಿತ್ ದೋವಲ್

ಹೊಸದಿಲ್ಲಿ: ಚೀನಾಗೆ  ಭಾರತದ ಗೌಪ್ಯ ರಕ್ಷಣಾ ಸಂಬಂಧಿ ಮಾಹಿತಿ ರವಾನಿಸಿದ ಆರೋಪದ ಮೇಲೆ ಫ್ರೀಲಾನ್ಸ್ ಪತ್ರಕರ್ತ ರಾಜೀವ್ ಶರ್ಮಾ ಅವರ ಬಂಧನ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.

"ಶರ್ಮಾಗೆ  ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬಹಳಷ್ಟು ಪರಿಚಿತರಾಗಿದ್ದರು ಹಾಗೂ ಪತ್ರಕರ್ತ ಕೂಡ ಈ ಬಗ್ಗೆ ಹೇಳಿಕೊಂಡಿದ್ದರು. ಆತನ ಅಕ್ರಮ ಚಟುವಟಿಕೆಗಳ ಬಗ್ಗೆ ದೋವಲ್‍ಗೆ ಅರಿವಿತ್ತೇ ಎಂಬ ತಾರ್ಕಿಕ ಪ್ರಶ್ನೆಯನ್ನು ಈಗ ಕೇಳಬೇಕಿದೆ,'' ಎಂದು ಕಳೆದ ನವೆಂಬರ್ ನಲ್ಲಿ ಶರ್ಮಾ ಸಂದರ್ಶನ ನಡೆಸಿದ್ದ ಹಿರಿಯ ಪತ್ರಕರ್ತ ಫರಂಜೊಯ್ ಗುಹಾ ಥಾಕುರ್ತಾ ಹೇಳಿದ್ದಾರೆ ಎಂದು The Telegraph ವರದಿ ಮಾಡಿದೆ.

ಶರ್ಮಾ ಅವರನ್ನು ಬಂಧಿಸಿದ ದಿಲ್ಲಿ ಪೊಲೀಸರ ಪ್ರಕಾರ ಅವರು ಕುನ್ಮಿಂಗ್ ಮೂಲದ ಚೀನೀ ವ್ಯಕ್ತಿ "ಜಾರ್ಜ್'' ಎಂಬಾತನಿಂದ ಜನವರಿ 2019ರಿಂದ ಸೆಪ್ಟೆಂಬರ್ 2020ರ ತನಕ ತಾನು ನೀಡಿದ ಮಾಹಿತಿಗಾಗಿ ಹಣ ಪಡೆದಿದ್ದರು. ಆದರೆ ಯಾವಾಗ ಗೌಪ್ಯ ಮಾಹಿತಿಯನ್ನು ರವಾನಿಸಲಾಗಿತ್ತೆಂದು ದಿಲ್ಲಿ ಪೊಲೀಸರು ಸ್ಪಷ್ಟವಾಗಿ ಹೇಳಿಲ್ಲ ಆದರೆ ಹಣ ಸಂದಾಯವಾದ ಅವಧಿಯಲ್ಲಿಯೇ ಮಾಹಿತಿ ರವಾನೆಯಾಗಿತ್ತೆಂದಾದಲ್ಲಿ ಗಡಿ ಉದ್ವಿಗ್ನತೆ ಇರುವ ಸಮಯದಲ್ಲಿಯೇ ಇಂತಹ ಮಾಹಿತಿ ಸೋರಿಕೆಯಾಗಿತ್ತೇ ಎಂಬ ಪ್ರಶ್ನೆಯೂ ಇದೆ.

"ಸರಕಾರ  ನನ್ನ ಮೇಲೆ ಏಕೆ ನಿಗಾ ಇಟ್ಟಿದೆ ಎಂದು ನನಗೆ ತಿಳಿದಿಲ್ಲ. ನಾನು ಯಾವುದೇ ದೇಶವಿರೋಧಿ ಅಥವಾ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡಿಲ್ಲ,'' ಎಂದು ಥಾರ್ಕುತಾ ಜತೆಗಿನ ಸಂದರ್ಶನದಲ್ಲಿ ಶರ್ಮಾ ಕಳೆದ ವರ್ಷ ಹೇಳಿದ್ದರು.

ಇಸ್ರೇಲಿ ಸ್ಪೈವೇರ್ ಪೆಗಾಸಸ್ ಕಣ್ಣಿಟ್ಟಿದ ಹಲವರಲ್ಲಿ ಶರ್ಮಾ ಅವರ ದೂರವಾಣಿ ಸಂಖ್ಯೆಯೂ ಇತ್ತೆಂಬ ಕಾರಣಕ್ಕೆ ಆಗ ಅವರು ಸುದ್ದಿಯಾಗಿದ್ದರು. ಆದರೆ ಶರ್ಮಾ ಮೇಲೆ ನಿಜವಾಗಿಯೂ ಸರಕಾರ ನಿಗಾ ಇಟ್ಟಿದ್ದರೆ ಈ ರೀತಿ ಮಾಹಿತಿ ಸೋರಿಕೆಯಾಗುತ್ತಿರಲಿಲ್ಲ.

ಥಾಕುರ್ತಾ ತಮ್ಮ ಸಂದರ್ಶನದಲ್ಲಿ ಶರ್ಮಾ ಅವರು ದೋವಲ್ ಜತೆ ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಶನ್‍ನಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು ಎಂದು ಬರೆದಿದ್ದರು. ರಿಡಿಫ್ ವೆಬ್ ಸೈಟ್‍ನಲ್ಲಿ ಶರ್ಮ ಅವರ ಲೇಖನ ಪ್ರಕಟಗೊಂಡಿದ್ದ ವೇಳೆ ಅವರು ಹೊಸದಿಲ್ಲಿ ಮೂಲದ ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಶನ್‍ನ ಹಿರಿಯ ಫೆಲ್ಲೋ ಎಂದು ಅವರ ಬಗ್ಗೆ ಪರಿಚಯ ನೀಡಲಾಗಿತ್ತು.

ಆದರೆ ಈ ಕುರಿತು ಫೌಂಡೇಶನ್ ಅನ್ನು ಕೇಳಿದಾಗ ಅಲ್ಲಿನ ಅಧಿಕಾರಿಯೊಬ್ಬರು ತಮಗೆ ಶರ್ಮಾ ಇಲ್ಲಿ ಕೆಲಸ ಮಾಡಿದ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ. ಈ ಫೌಂಡೇಶನ್ ಅನ್ನು 2009ರಲ್ಲಿ ಸ್ಥಾಪಿಸಿದಾಗ ದೋವಲ್ ಅದರ ಸ್ಥಾಪಕ ನಿರ್ದೇಶಕರಾಗಿದ್ದರು.

ಶರ್ಮಾ ಆರೋಪಿಸಿದಂತೆ ಗೌಪ್ಯ ರಕ್ಷಣಾ ಮಾಹಿತಿಯನ್ನು ರವಾನಿಸಿದ್ದೇ ಆದಲ್ಲಿ ಅವರಿಗೆ ಅವುಗಳು ಹೇಗೆ ದೊರಕಿದವು ಎಂಬ ಪ್ರಶ್ನೆಯಿದೆ. ಪತ್ರಕರ್ತನಾಗಿ ಕೆಲವೊಂದು ಮಾಹಿತಿ  ಸಂಗ್ರಹಿಸುತ್ತಿದ್ದೇನೆಂದು ಹೇಳಿಕೊಂಡು ಅವರು ಮಾಹಿತಿ ಪಡೆದಿರಬಹುದೆಂದು ದಿಲ್ಲಿ ಪೊಲೀಸರು ಹೇಳುತ್ತಿದ್ದಾರೆ.

ಆದರೆ ಪತ್ರಕರ್ತರು ವರದಿಗಾಗಿ ಈ ಮಾಹಿತಿ ಕೇಳುತ್ತಿರುವಾಗ ಗೌಪ್ಯ ಮಾಹಿತಿಯನ್ನು ಅಧಿಕಾರಿಗಳು ನೀಡಿರುವ ಸಾಧ್ಯತೆಯಿಲ್ಲ. ಅಷ್ಟಕ್ಕೂ ಸರಕಾರಿ ಮಟ್ಟದಲ್ಲಿ ಅವರಿಗೆ ಇಂತಹ ದಾಖಲೆಗಳನ್ನು ಯಾರು ಒದಗಿಸಿದ್ದಾರೆಂದು ತಿಳಿಯಬೇಕಿದೆ ಎಂದು ನಿವೃತ್ತ ಗುಪ್ತಚರ ಬ್ಯುರೋ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಶರ್ಮಾ ಒಬ್ಬ ಮಾನ್ಯತೆ ಪಡೆದ ಪತ್ರಕರ್ತರಾಗಿದ್ದರು. ಅವರು ರಕ್ಷಣಾ ವ್ಯವಸ್ಥೆ, ವಿದೇಶಾಂಗ ವ್ಯವಹಾರಗಳ ಕುರಿತು ಬರೆಯುತ್ತಿದ್ದರು ಅವರು ಇಂತಹ ಒಬ್ಬ ವ್ಯಕ್ತಿಯಾಗಿರಬಹುದೆಂದು ನಾನು ಅಂದುಕೊಂಡಿರಲಿಲ್ಲ,'' ಎಂದು ಥಾಕುರ್ತಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News