ಪಾಕ್‌ನಿಂದ ಡ್ರೋನ್ ಗಳ ಮೂಲಕ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳ ಪೂರೈಕೆ: ಜಮ್ಮು-ಕಾಶ್ಮೀರ ಪೊಲೀಸರು

Update: 2020-09-22 16:54 GMT

ಹೊಸದಿಲ್ಲಿ,ಸೆ.22: ಗಡಿಯಿಂದ 12 ಕಿ.ಮೀ.ದೂರದಲ್ಲಿರುವ ಅಖ್ನೂರ್‌ನ ಝಡ್ ಸೋಹಲ್ ಗ್ರಾಮದಲ್ಲಿ ಕಳೆದ ರಾತ್ರಿ ಅಸಾಲ್ಟ್ ರೈಫಲ್‌ಗಳು ಮತ್ತು ಒಂದು ಪಿಸ್ತೂಲು ಪತ್ತೆಯಾಗಿದೆ ಎಂದು ಮಂಗಳವಾರ ತಿಳಿಸಿದ ಜಮ್ಮು-ಕಾಶ್ಮೀರ ಪೊಲೀಸರು, ಪಾಕಿಸ್ತಾನವು ರಾತ್ರಿ ವೇಳೆ ನಿಯಂತ್ರಣ ರೇಖೆಯನ್ನು ಅತಿಕ್ರಮಿಸಿ ಭಯೋತ್ಪಾದಕರಿಗೆ ಎಕೆ-47ನಂತಹ ಶಸ್ತ್ರಾಸ್ತ್ರಗಳನ್ನು ಪೂರೈಸಲು ಡ್ರೋನ್‌ಗಳನ್ನು ಬಳಸುತ್ತಿದೆ ಎಂದು ಹೇಳಿದರು. ಸಾಕ್ಷ್ಯಾಧಾರಗಳು ಇದರ ಹಿಂದೆ ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಕೈವಾಡವನ್ನು ಬೆಟ್ಟು ಮಾಡಿವೆ ಎಂದೂ ಅವರು ತಿಳಿಸಿದರು.

ಅಖ್ನೂರ್ ಗ್ರಾಮದಲ್ಲಿ ಪಾಕಿಸ್ತಾನಿ ಡ್ರೋನ್ ರಾತ್ರಿ ವೇಳೆ ಶಸ್ತ್ರಾಸ್ತ್ರಗಳನ್ನು ಬೀಳಿಸಿದೆ ಎಂಬ ಮಾಹಿತಿಗಳ ಮೇರೆಗೆ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಎರಡು ಎಕೆ ಅಸಾಲ್ಟ್ ರೈಫಲ್‌ಗಳು,ಒಂದು ಪಿಸ್ತೂಲು,ಮೂರು ಎಕೆ ಮ್ಯಾಗಝಿನ್‌ಗಳು ಮತ್ತು 90 ಸುತ್ತು ಗುಂಡುಗಳು ಪತ್ತೆಯಾಗಿವೆ. ಇವು ಕಾಶ್ಮೀರ ಕಣಿವೆಯಲ್ಲಿನ ಭಯೋತ್ಪಾದಕರಿಗೆ ತಲುಪಲಿದ್ದವು ಎಂದು ತಿಳಿಸಿದ ಜಮ್ಮುವಿನ ಹಿರಿಯ ಪೊಲೀಸ್ ಅಧಿಕಾರಿ ಶ್ರೀಧರ ಪಾಟೀಲ ಅವರು,ಇದರ ಹಿಂದೆ ಜೈಷೆ ಮುಹಮ್ಮದ್‌ನ ಕೈವಾಡವಿರುವುದನ್ನು ಪ್ರಾಥಮಿಕ ತನಿಖೆಯು ಬೆಟ್ಟು ಮಾಡಿದೆ ಎಂದರು.

ಕಳೆದ ವರ್ಷ ಪಂಜಾಬಿನಲ್ಲಿ ಗಡಿಯ ಸಮೀಪ ಪಾಕಿಸ್ತಾನದ ಡ್ರೋನ್‌ಗಳು ಕಂಡುಬಂದಿದ್ದು,ಈ ಬಗ್ಗೆ ಪೊಲೀಸರು ಬಿಎಸ್‌ಎಫ್‌ಗೆ ಮಾಹಿತಿಯನ್ನು ನೀಡಿದ್ದರು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಪಾಕ್ ಡ್ರೋನ್‌ಗಳು ಎಕೆ-47 ರೈಫಲ್‌ಗಳು,ಗ್ರೆನೇಡ್‌ಗಳು ಮತ್ತು ಸೆಟಲೈಟ್ ಫೋನ್‌ಗಳನ್ನು ಬೀಳಿಸಿದ್ದನ್ನೂ ಪಂಜಾಬ್ ಪೋಲಿಸರು ವರದಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News