ಎಲ್‌ಡಿಎಫ್ ಸದಸ್ಯರ ವಿರುದ್ಧದ ಪ್ರಕರಣ ಹಿಂದೆಗೆಯುವಂತೆ ಕೋರಿ ಸಲ್ಲಿಸಿದ ಮನವಿ ತಿರಸ್ಕೃರಿಸಿದ ನ್ಯಾಯಾಲಯ

Update: 2020-09-22 16:25 GMT

ತಿರುವನಂತಪುರ, ಸೆ. 22: ಕೇರಳ ವಿಧಾನ ಸಭೆಯಲ್ಲಿ 2015ರಲ್ಲಿ ಕೋಲಾಹಲ ಸೃಷ್ಟಿಸಿದ ಎಲ್‌ಡಿಎಫ್ ಶಾಸಕರು ಹಾಗೂ ಸದಸ್ಯರ ವಿರುದ್ಧದ ಪ್ರಕರಣಗಳನ್ನು ಹಿಂದೆ ತೆಗೆಯುವಂತೆ ಕೋರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರಕಾರ ಸಲ್ಲಿಸಿದ ಮನವಿಯನ್ನು ತಿರುವನಂತಪುರ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ರಾಜ್ಯ ವಿಧಾನ ಸಭೆಯಲ್ಲಿ 2015ರಲ್ಲಿ ಬಜೆಟ್ ಮಂಡನೆ ಸಂದರ್ಭ ಆಗಿನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರದ ಹಣಕಾಸು ಸಚಿವ ದಿವಂಗತ ಕೆ.ಎಂ ಮಣಿ ಅವರು ತಡೆಯಲು ಪ್ರಯತ್ನಿಸಿದರೂ ಕೋಲಾಹಲ ಸೃಷ್ಟಿಸಿದ್ದ ಹಾಗೂ ಸಾರ್ವಜನಿಕ ಸೊತ್ತುಗಳನ್ನು ಧ್ವಂಸ ಮಾಡಿದ್ದ ಇ.ಪಿ. ಜಯರಾಜನ್ ಹಾಗೂ ಕೆ.ಟಿ. ಜಲೀಲ್ ಅವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿತ್ತು. ಇ.ಪಿ. ಜಯರಾಜನ್ ಹಾಗೂ ಕೆ.ಟಿ ಜಲೀಲ್ ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಲ್‌ಡಿಎಫ್‌ನ ಶಾಸಕರು. ರಾಜ್ಯದಲ್ಲಿ ಎಲ್‌ಡಿಎಫ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಬ್ಬರು ಶಾಸಕರ ವಿರುದ್ಧದ ಪ್ರಕರಣಗಳನ್ನು ಹಿಂದೆ ತೆಗೆಯಲು ನಿರ್ಧರಿಸಿತ್ತು. ಪ್ರತಿಪಕ್ಷಗಳ ಪ್ರತಿಭಟನೆಯ ಹೊರತಾಗಿಯೂ ಈ ಪ್ರಕರಣ ಹಿಂದೆ ತೆಗೆಯಲು ಸರಕಾರಿ ವಕೀಲರಿಗೆ ನಿರ್ದೇಶನ ನೀಡಲಾಗಿದೆ ಎಂದು ವಿಧಾನ ಸಭೆಯಲ್ಲಿ 2018 ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು. ಆದರೆ, ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News