ದೇಶಾದ್ಯಂತ ಉಚ್ಚ ನ್ಯಾಯಾಲಯಗಳಲ್ಲಿ ಗರ್ಭಪಾತ ಪ್ರಕರಣಗಳ ಹೆಚ್ಚಳ: ವರದಿ

Update: 2020-09-22 16:41 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.22: ದೇಶಾದ್ಯಂತ ಉಚ್ಚ ನ್ಯಾಯಾಲಯಗಳು ಗರ್ಭಪಾತ ಪ್ರಕರಣಗಳ ಏರಿಕೆಗೆ ಸಾಕ್ಷಿಯಾಗುತ್ತಿವೆ ಎಂದು ಮಹಿಳೆಯರ ಹಕ್ಕುಗಳ ರಕ್ಷಣೆಗೆ ಮತ್ತು ಅವರಿಗೆ ಸುರಕ್ಷಿತ ಗರ್ಭಪಾತ ಸೌಲಭ್ಯ ದೊರೆಯುವಂತೆ ಮಾಡಲು ಶ್ರಮಿಸುತ್ತಿರುವ ‘ಪ್ರತಿಜ್ಞಾ ’ ಸಂಘಟನೆಯು ತನ್ನ ವರದಿಯಲ್ಲಿ ತಿಳಿಸಿದೆ.

14 ಉಚ್ಚ ನ್ಯಾಯಾಲಯಗಳಲ್ಲಿ ಒಟ್ಟು 243 ಪ್ರಕರಣಗಳು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಮೇಲ್ಮನವಿ ಸಲ್ಲಿಕೆಯಾಗಿದ್ದವು. ಶೇ.84ರಷ್ಟು ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿರುವ ವರದಿಯು,ಒಟ್ಟು ಪ್ರಕರಣಗಳ ಪೈಕಿ ಶೇ.74ರಷ್ಟು ಪ್ರಕರಣಗಳಲ್ಲಿ 20 ವಾರಗಳ ಗರ್ಭಾವಸ್ಥೆಯ ಬಳಿಕ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಶೇ.23ರಷ್ಟು ಪ್ರಕರಣಗಳನ್ನು 20 ವಾರಗಳ ಮೊದಲೇ ದಾಖಲಿಸಲಾಗಿತ್ತು ಮತ್ತು ಅವರು ನ್ಯಾಯಾಲಯಕ್ಕೆ ಹೋಗುವ ಅಗತ್ಯವೇ ಇರಲಿಲ್ಲ. ಈ ಶೇ.74ರಷ್ಟು ಪ್ರಕರಣಗಳಲ್ಲಿ ಶೇ.29ರಷ್ಟು ಅತ್ಯಾಚಾರ/ಲೈಂಗಿಕ ದೌರ್ಜನ್ಯಕ್ಕೆ ಮತ್ತು ಶೇ.42ರಷ್ಟು ಭ್ರೂಣ ಊನಗಳಿಗೆ ಸಂಬಂಧಿಸಿದ್ದವು. ಶೇ.23ರಷ್ಟು ಪ್ರಕರಣಗಳಲ್ಲಿ ಶೇ.18ರಷ್ಟು ಅತ್ಯಾಚಾರ/ಲೈಂಗಿಕ ದೌರ್ಜನ್ಯಕ್ಕೆ ಮತ್ತು ಶೇ.6ರಷ್ಟು ಭ್ರೂಣ ಊನಗಳಿಗೆ ಸಂಬಂಧಿಸಿದ್ದವು ಎಂದು ಹೇಳಿದೆ.

ಪ್ರಕರಣಗಳು ಹೆಚ್ಚುತ್ತಿರುವುದು ಈ ದೇಶದಲ್ಲಿ ಸುರಕ್ಷಿತ ಮತ್ತು ಕಾನೂನಾತ್ಮಕ ಗರ್ಭಪಾತ ಸೇವೆಗಳಿಗೆ ಈಗಲೂ ಕೊರತೆಯಿದೆ ಎಂಬ ಕಟುಸತ್ಯವನ್ನು ತೋರಿಸುತ್ತಿದೆ ಎಂದು ಪ್ರತಿಜ್ಞಾದ ಅಭಿಯಾನ ಸಲಹಾ ಸಮಿತಿಯ ಸದಸ್ಯ ಹಾಗೂ ವರದಿಯ ಲೇಖಕ ಅನುಭ್ ರಸ್ತೋಗಿ ವರದಿ ಬಿಡುಗಡೆ ಸಂದರ್ಭದಲ್ಲಿ ಹೇಳಿದರೆ,20 ವಾರಗಳಿಗೂ ಕಡಿಮೆ ಗರ್ಭಾವಸ್ಥೆಯ ಮಹಿಳೆಯರು/ಬಾಲಕಿಯರೂ ನ್ಯಾಯಾಲಯಗಳ ಮೊರೆ ಹೋಗಬೇಕಾಗಿದ್ದು ಹತಾಶೆಯ ವಿಷಯವಾಗಿದೆ ಎಂದು ಸಮಿತಿಯ ಇನ್ನೋರ್ವ ಸದಸ್ಯ ವಿ.ಎಸ್.ಚಂದ್ರಶೇಖರ ಕಳವಳ ವ್ಯಕ್ತಪಡಿಸಿದರು.

 ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯ್ದೆಯು 20 ವಾರಗಳ ಒಳಗಿನ ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡುತ್ತದೆ. ಈ ಪೈಕಿ ಹೆಚ್ಚಿನವರು ಲೈಂಗಿಕ ದೌರ್ಜನ್ಯದ ಸಂತ್ರಸ್ತರಾಗಿರುತ್ತಾರೆ ಮತ್ತು ನ್ಯಾಯಾಲಯಗಳಿಗೆ ಎಡತಾಕುವುದು ಅವರ ನೋವನ್ನು ಹೆಚ್ಚಿಸುತ್ತದೆ ಎಂದರು.

ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಕಾನೂನಿಗೆ ತಿದ್ದುಪಡಿಗಳನ್ನು ತರುವುದು ಮಹತ್ವದ್ದಾಗಿದೆ ಎಂದು ವರದಿಯು ಒತ್ತಿಹೇಳಿದೆ. ಎಂಟಿಪಿ (ತಿದ್ದುಪಡಿ) ಮಸೂದೆ,2020 ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಕಾಯುತ್ತಿದೆ. ಸಾಮಾಜಿಕ ಸಂಸ್ಥೆಗಳು ಕೆಲವು ಬದಲಾವಣೆಗಳನ್ನು ಶಿಫಾರಸು ಮಾಡಿವೆ ಮತ್ತು ಇವು ಸ್ವೀಕರಿಸಲ್ಪಟ್ಟರೆ ಕಾಯ್ದೆಯು ಪ್ರಗತಿಪರವಾಗುತ್ತದೆ ಮತ್ತು ಹಕ್ಕುಗಳ ಆಧರಿತವಾಗುತ್ತದೆ ಎಂದು ಹೇಳಿರುವ ಅದು,ಮಸೂದೆಯನ್ನು ಈಗಿನ ರೂಪದಲ್ಲಿಯೇ ಅಂಗೀಕರಿಸಿದರೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆಯೇನೂ ಕಡಿಮೆಯಾಗುವುದಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News