ಲೇಸರ್ ಪಥದರ್ಶಕ ಟ್ಯಾಂಕ್ ನಿರೋಧಕ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

Update: 2020-09-23 14:11 GMT

ಹೊಸದಿಲ್ಲಿ,ಸೆ.23: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಸ್ವದೇಶಿ ನಿರ್ಮಿತ ಲೇಸರ್ ಪಥದರ್ಶಕ ಟ್ಯಾಂಕ್ ನಿರೋಧಕ ನಿರ್ದೇಶಿತ ಕ್ಷಿಪಣಿ (ಎಟಿಜಿಎಂ)ಯ ಪರೀಕ್ಷಾರ್ಥ ಪ್ರಯೋಗವನ್ನು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿರುವ ಆರ್ಮರ್ಡ್ ಕಾರ್ಪ್ಸ್ ಸೆಂಟರ್ ಆ್ಯಂಡ್ ಸ್ಕೂಲ್‌ನ ಫೈರಿಂಗ್ ರೇಂಜ್‌ನಿಂದ ಮುಖ್ಯ ಯುದ್ಧ ಟ್ಯಾಂಕ್ ಅರ್ಜುನ್ ಮೂಲಕ ಯಶಸ್ವಿಯಾಗಿ ನಡೆಸಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಈ ಸಾಧನೆಗಾಗಿ ಡಿಆರ್‌ಡಿಒಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ರಕ್ಷಣಾ ಕವಚ ಹೊಂದಿರುವ ಸೇನೆಯ ಗುಂಡು ನಿರೋಧಕ ಯುದ್ಧ ವಾಹನಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿರುವ ಸಿಡಿತಲೆಯನ್ನು ಈ ಕ್ಷಿಪಣಿಯಲ್ಲಿ ಬಳಸಲಾಗುತ್ತದೆ ಎಂದು ಡಿಆರ್‌ಡಿಒ ವಿಜ್ಞಾನಿಗಳು ತಿಳಿಸಿದರು.

ಕ್ಷಿಪಣಿಯು ಉಡಾವಣೆಯ ಬಳಿಕ ಮೂರು ಕಿ.ಮೀ.ದೂರದಲ್ಲಿ ಸ್ಥಿತಗೊಂಡಿದ್ದ ಗುರಿಯನ್ನು ಯಶಸ್ವಿಯಾಗಿ ಭೇದಿಸಿದೆ. ಸದ್ಯಕ್ಕೆ ಕ್ಷಿಪಣಿಯನ್ನು ಅರ್ಜುನ್ ಟ್ಯಾಂಕ್ ಮೂಲಕ ಪರೀಕ್ಷಿಸಲಾಗುತ್ತಿದ್ದು,ಇತರ ವೇದಿಕೆಗಳಿಂದಲೂ ಅದರ ಉಡಾವಣೆ ಸಾಧ್ಯವಾಗುವಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ.

ಪುಣೆಯಲ್ಲಿರುವ ಡಿಆರ್‌ಡಿಒ ಅಂಗಸಂಸ್ಥೆಗಳಾದ ಆರ್ಮಾಮೆಂಟ್ ರೀಸರ್ಚ್ ಮತ್ತು ಹೈ ಎನರ್ಜಿ ಮಟೀರಿಯಲ್ಸ್ ರೀಸರ್ಚ್ ಲ್ಯಾಬೊರೇಟರಿ ಡೆಹ್ರಾಡೂನ್‌ನಲ್ಲಿರುವ ಡಿಆರ್‌ಡಿಒದ ಇನ್‌ಸ್ಟ್ರುಮೆಂಟ್ಸ್ ರೀಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್‌ನ ಸಹಭಾಗಿತ್ವದಲ್ಲಿ ಈ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News