ಶರದ್ ಪವಾರ್‌ಗೆ ನೋಟಿಸು ಜಾರಿ ಮಾಡಲು ನಿರ್ದೇಶಿಸಿಲ್ಲ: ಚುನಾವಣಾ ಆಯೋಗ

Update: 2020-09-23 14:53 GMT

ಹೊಸದಿಲ್ಲಿ, ಸೆ. 23: ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ಅವರಿಗೆ ನೋಟಿಸು ಜಾರಿ ಮಾಡುವಂತೆ ಆದಾಯ ತೆರಿಗೆ ಇಲಾಖೆಗೆ ಚುನಾವಣಾ ಆಯೋಗ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ಹೇಳಿದೆ. ತನ್ನ ಚುನಾವಣಾ ಅಫಿಡವಿಟ್‌ಗಳ ಬಗ್ಗೆ ‘ಸ್ಪಷ್ಟನೆ ಹಾಗೂ ವಿವರಣೆ’ ನೀಡುವಂತೆ ಕೋರಿ ಆದಾಯ ತೆರಿಗೆ ಇಲಾಖೆ ನೋಟಿಸು ಜಾರಿ ಮಾಡಿದೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಹೇಳಿದ ಒಂದು ದಿನದ ಬಳಿಕ ಚುನಾವಣಾ ಆಯೋಗ ಈ ಸ್ಪಷ್ಟನೆ ನೀಡಿದೆ. 

ವಿವಾದಾತ್ಮಕ ಕೃಷಿ ವಿಧೇಯಕದ ಮತದಾನದ ಸಂದರ್ಭ ಗದ್ದಲ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಅಮಾನತಿಗೊಳಗಾದ ರಾಜ್ಯಸಭೆಯ 8 ಮಂದಿ ಸದಸ್ಯರಿಗೆ ಬೆಂಬಲ ವ್ಯಕ್ತಪಡಿಸಿದ್ದ ಶರದ್ ಪವಾರ್, ಕೇಂದ್ರ ಸರಕಾರ ತನ್ನ ರಾಜಕೀಯ ವಿರೋಧಿಗಳ ಮೇಲೆ ತೆರಿಗೆ ನೋಟಿಸುಗಳೆಂಬ ಅಸ್ತ್ರ ಬಳಸುತ್ತಿದೆ ಎಂದು ಆರೋಪಿಸಿದ್ದರು. ‘‘ನಾನು ನಿನ್ನೆ (ಸೋಮವಾರ) ನೋಟಿಸು ಸ್ವೀಕರಿಸಿದೆ. ಅವರು (ಕೇಂದ್ರ ಸರಕಾರ)ಎಲ್ಲ ಸದಸ್ಯರೊಂದಿಗೆ ನಮ್ಮನ್ನು ಕೂಡ ಪ್ರೀತಿಸುತ್ತಿರುವುದು ನಮಗೆ ಸಂತಸ ಉಂಟು ಮಾಡಿದೆ. ಚುನಾವಣಾ ಆಯೋಗ ನಿರ್ದೇಶಿಸಿದ ಬಳಿಕ ಆದಾಯ ತೆರಿಗೆ ಇಲಾಖೆ ನೋಟಿಸು ಜಾರಿ ಮಾಡಿದೆ. ನಾವು ನೋಟಿಸಿಗೆ ಪ್ರತಿಕ್ರಿಯೆ ನೀಡಲಿದ್ದೇವೆ’’ ಎಂದು ಶರದ್ ಪವಾರ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News