ಆಕ್ಸ್‌ಫರ್ಡ್ ಕೋವಿಶೀಲ್ಡ್ ಲಸಿಕೆಯ 2,3ನೇ ಹಂತದ ಪ್ರಯೋಗ ಮುಂಬೈಯ 2 ಆಸ್ಪತ್ರೆಗಳಲ್ಲಿ ಆರಂಭ

Update: 2020-09-23 15:09 GMT
ಸಾಂದರ್ಭಿಕ ಚಿತ್ರ

ಮುಂಬೈ, ಸೆ. 23: ಕೋವಿಡ್-19 ಲಸಿಕೆ ಆಕ್ಸ್‌ಫರ್ಡ್ ಕೋವಿಶೀಲ್ಡ್‌ನ 2ನೇ ಹಾಗೂ 3ನೇ ಹಂತದ ಪ್ರಯೋಗ ಮುಂಬೈಯ ಕಿಂಗ್ ಎಡ್ವರ್ಡ್ ಸ್ಮಾರಕ ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಆರಂಭವಾಗಿದೆ. ಪರೇಲ್ ಪ್ರದೇಶದಲ್ಲಿರುವ ಈ ಆಸ್ಪತ್ರೆ ಲಸಿಕೆಯ ಪ್ರಯೋಗ ನಡೆಸಲು ಮಹಾರಾಷ್ಟ್ರ ನೀತಿ ಸಮಿತಿಯಿಂದ ಮಂಗಳವಾರ ಅನುಮೋದನೆ ಪಡೆದುಕೊಂಡಿದೆ. ಪ್ರಯೋಗಕ್ಕಾಗಿ ಸ್ವಯಂಸೇವಕರ ತಪಾಸಣೆ ಕಾರ್ಯ ಆರಂಭಿಸಲಾಗಿದೆ ಎಂದು ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಹೇಮಂತ್ ದೇಶ್‌ಮುಖ್ ತಿಳಿಸಿದ್ದಾರೆ. 

ಆಸ್ಪತ್ರೆ 100 ಸ್ವಯಂಸೇವಕರ ಮೇಲೆ ಈ ಪ್ರಯೋಗ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ. ಲಸಿಕೆ ಪ್ರಯೋಗ ನಡೆಸಲು ಬೃಹನ್ಮುಂಬೈ ಮಹಾನಗರ ಪಾಲಿಕೆ ನಡೆಸುವ ಇನ್ನೊಂದು ಆಸ್ಪತ್ರೆಯಾಗಿರುವ ಮುಂಬೈ ಮೂಲದ ಬಿವೈಎಸ್ ನಾಯರ್ ಆಸ್ಪತ್ರೆ ಕೂಡ ಅನುಮತಿ ಪಡೆದುಕೊಂಡಿದೆ. ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆ ಹಾಗೂ ಬಿವೈಎಲ್ ನಾಯರ್ ಆಸ್ಪತ್ರೆ ಒಟ್ಟಾಗಿ 200 ಸ್ವಯಂಸೇವಕರ ಮೇಲೆ ಈ ಲಸಿಕೆಯ ಪ್ರಯೋಗ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಯೋಗದ ಒಂದು ಭಾಗವಾಗಿ ಆ್ಯಂಟಿಜನ್ ಪರೀಕ್ಷೆ ಹಾಗೂ ಆರ್‌ಟಿ-ಪಿಎಸಿಆರ್-ಎರಡರಲ್ಲೂ ಕೊರೋನ ನೆಗೆಟಿವ್ (ಕೊರೋನ ಸೋಂಕು ಇಲ್ಲ) ಕಂಡು ಬಂದರೆ ಲಸಿಕೆ ನೀಡಲಾಗುವುದು ಎಂದು ಅವು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News