ಗುಜರಾತ್ : ಅವಮಾನಕಾರಿ ಟ್ವೀಟ್‌ಗಾಗಿ ಪತ್ರಕರ್ತ ಆಕಾರ್ ಪಟೇಲ್ ಬಂಧನ,ಜಾಮೀನು ಬಿಡುಗಡೆ

Update: 2020-09-23 16:53 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.23: ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಅವಮಾನಕಾರಿ ಟ್ವೀಟ್ ಮಾಡಿದ್ದ ಆರೋಪದಲ್ಲಿ ಗುಜರಾತ್ ಪೊಲೀಸರು ಬುಧವಾರ ಪತ್ರಕರ್ತ ಆಕಾರ್ ಪಟೇಲ್ ಅವರನ್ನು ಬಂಧಿಸಿದ್ದಾರೆ. ತನ್ನನ್ನು ಪೊಲೀಸರು ಬಂಧಿಸಿದ್ದರಾದರೂ ತಾನು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರಿಂದ ವಶಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಪಟೇಲ್ ಸುದ್ದಿಸಂಸ್ಥೆಗೆ ತಿಳಿಸಿದರು.

ಬಿಜೆಪಿ ಶಾಸಕ ಪೂರ್ಣೇಶಭಾಯಿ ಈಶ್ವರಭಾಯಿ ಮೋದಿ ಕಳೆದ ಜುಲೈನಲ್ಲಿ ಸೂರತ್‌ನಲ್ಲಿ ಪಟೇಲ್ ವಿರುದ್ಧ ದೂರನ್ನು ದಾಖಲಿಸಿದ್ದರು. ಎಫ್‌ಐಆರ್‌ನಲ್ಲಿ ತಿಳಿಸಿರುವಂತೆ ಮೋದಿ ಸಾಮಾಜಿಕ ಕಾರ್ಯಕರ್ತ ಮತ್ತು ಗುಜರಾತಿನ ಮೋಧ-ಮೋದಿ ಸಮುದಾಯದ ಮುಖ್ಯಸ್ಥರಾಗಿದ್ದಾರೆ.

ಪಟೇಲ್ ಕೋಮುದ್ವೇಷವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ತನ್ನ ಟ್ವಿಟರ್ ಖಾತೆಯನ್ನು ಬಳಸಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಜಾತಿಗೆ ಕುಂದು ತರಲು ಹಿಂದು-ಗಾಂಚಿ ಸಮುದಾಯವನ್ನು ಅವಮಾನಿಸಿದ್ದರು ಎಂದು ಶಾಸಕರು ತನ್ನ ದೂರಿನಲ್ಲಿ ಆರೋಪಿಸಿದ್ದರು.

  ಪಟೇಲ್ ಜೂ.24 ಮತ್ತು .27ರ ನಡುವೆ ಮಾಡಿದ್ದ ಮೂರು ಟ್ವೀಟ್‌ಗಳಿಗೆ ಪ್ರಕರಣವು ಸಂಬಂಧಿಸಿದೆ. ಪ್ರಧಾನಿ ಮೋದಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಒಬಿಸಿ ಎಂದು ವರ್ಗೀಕರಿಸಿದ್ದ ಸಮುದಾಯಕ್ಕೆ ಸೇರಿದ್ದಾರೆ ಮತ್ತು 2002ರಲ್ಲಿ ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಿದ್ದ ಆರೋಪಿ ಮುಸ್ಲಿಮರೂ ಅದೇ ಸಮುದಾಯಕ್ಕೆ ಸೇರಿದವರಾಗಿದ್ದರು ಎಂದು ಈ ಟ್ವೀಟ್‌ಗಳಲ್ಲಿ ಹೇಳಿದ್ದ ಪಟೇಲ್,ಬಿಜೆಪಿ ಮತ್ತು ಆರೆಸ್ಸೆಸ್ ಇತರ ಭಾರತೀಯರ,ವಿಶೇಷವಾಗಿ ಮುಸ್ಲಿಮರ ವಿರುದ್ಧದ ಹಿಂಸಾಚಾರಗಳಿಂದ ಲಾಭ ಪಡೆದುಕೊಳ್ಳುತ್ತಿವೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News