ಪಂಜಾಬ್: ಕಾವು ಪಡೆದ ರೈತ ಚಳವಳಿ

Update: 2020-09-24 15:20 GMT

ಚಂಡೀಗಢ, ಸೆ.24: ಕೇಂದ್ರ ಸರಕಾರವು ಸಂಸತ್‌ನಲ್ಲಿ ಮಂಡಿಸಿದ್ದ ಮೂರು ಕೃಷಿ ವಿಧೇಯಕಗಳನ್ನು ವಿರೋಧಿಸಿ ಪಂಜಾಬ್‌ನಾದ್ಯಂತ ರೈತರು ಗುರುವಾರದಿಂದ ಮೂರು ದಿನಗಳ ‘ರೈಲ್ ರೋಕೋ’ ಚಳವಳಿಯನ್ನು ಆರಂಭಿಸಿದ್ದಾರೆ. ರೈತ ಮುಷ್ಕರದ ಹಿನ್ನೆಲೆಯಲ್ಲಿ ಫಿರೋಝ್‌ಪುರ ರೈಲು ನಿಲ್ದಾಣವು ವಿಶೇಷ ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.

ಪ್ರಯಾಣಿಕರ ಸುರಕ್ಷತೆ ಹಾಗೂ ಯಾವುದೇ ಸಂಭಾವ್ಯ ಹಾನಿಯಿಂದ ರೈಲ್ವೆ ಆಸ್ತಿ ಪಾಸ್ತಿಗಳನ್ನು ರಕ್ಷಿಸುವುದಕ್ಕಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಮೂರು ಕೃಷಿ ವಿಧೇಯಕಗಳನ್ನು ವಿರೋಧಿಸಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯು ರೈಲ್ ರೋಕೋ ಚಳವಳಿಗೆ ಕರೆ ನೀಡಿದ್ದು, ಆನಂತರ ವಿವಿಧ ಕಾರ್ಮಿಕ ಸಂಘಟನೆಗಳು ಕೂಡಾ ತಮ್ಮ ಬೆಂಬಲವನ್ನು ನೀಡಿದ್ದವು.

ಬರ್ನಾಲಾ ಹಾಗೂ ಸಂಗ್ರೂರ್ ಗ್ರಾಮಗಳಲ್ಲಿ ಭಾರತೀಯ ಕಿಸಾನ್ ಒಕ್ಕೂಟದ ಕಾರ್ಯಕರ್ತರು ಗುರುವಾರ ರೈಲು ಹಳಿಗಳ ಮೇಲೆ ಕುಳಿತುಕೊಂಡು ಪ್ರತಿಭಟನೆ ನಡೆಸಿದರು. ಸರಕಾರಿ ಉದ್ಯೋಗಿಗಳು ಹಾಗೂ ಕಾರ್ಮಿಕರು ಕೂಡಾ ತಮ್ಮ ಪ್ರತಿ ಭಟನೆಗೆ ಬೆಂಬಲ ನೀಡುತ್ತಿವೆಯೆಂದು ಕಿಸಾನ್ ಒಕ್ಕೂಟದ ಪ್ರತಿನಿಧಿಗಳು ತಿಳಿಸಿದ್ದಾರೆ.

ಆದಾಗ್ಯೂ ಚಳವಳಿಗೆ ರಾಜಕೀಯ ಬಣ್ಣ ಬರಬಾರದೆಂಬ ಉದ್ದೇಶದಿಂದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಕೂಡದೆಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಚಿವರು,ಸಂಸದರು ಹಾಗೂ ಶಾಸಕರಿಗೆ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಅಧ್ಯಕ್ಷ ಸತ್ನಾಮ್ ಸಿಂಗ್ ಪನ್ನೂ ಮನವಿ ಮಾಡಿದ್ದಾರೆ.

ಬಿಜೆಪಿ ನಾಯಕರನ್ನು ಘೇರಾವೊ ಮಾಡುವಂತೆ ಹಾಗೂ ಕೃಷಿ ವಿಧೇಯಕಗಳ ಪರವಾಗಿ ಸಂಸತ್‌ನಲ್ಲಿ ಮತ ಚಲಾಯಿಸಿದವರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸುವಂತೆ ಅವರು ರೈತರಿಗೆ ಕರೆ ನೀಡಿದ್ದಾರೆ. ನೂತನ ಕೃಷಿ ವಿಧೇಯಕಗಳು ಮಸೂದೆಗಳಾಗಿ ಜಾರಿಗೆ ಬಂದಲ್ಲಿ ತಮ್ಮ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯಲಾರದು ಹಾಗೂ ರೈತರು ಬೃಹತ್ ಕಾರ್ಪೋರೇಟ್ ಕಂಪೆನಿಗಳ ಹಿಡಿತಕ್ಕೆ ಸಿಲುಕುವ ಅಪಾಯವಿದೆಯೆಂದು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News