ರೈತರ ಬಳಿಕ ಈಗ ಕಾರ್ಮಿಕರ ಮೇಲೆ ಕೇಂದ್ರ ಸರಕಾರ ದಾಳಿ: ರಾಹುಲ್ ಗಾಂಧಿ

Update: 2020-09-24 16:56 GMT

ಹೊಸದಿಲ್ಲಿ, ಸೆ. 24: ಸಂಸತ್ತಿನಲ್ಲಿ ಬುಧವಾರ ಅಂಗೀಕರಿಸಲಾದ 3 ಕಾರ್ಮಿಕ ವಿಧೇಯಕಗಳ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ನಾಯಕಿ ಪ್ರಿಯಾಂಕಾ ಗಾಂಧಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರಕಾರ ‘ಗೆಳೆಯರ ಲಾಭ’ಕ್ಕಾಗಿ ದೇಶದ ಬಡ ಜನರನ್ನು ಶೋಷಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕಂಪೆನಿಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸುವ ಹಾಗೂ ಸರಕಾರದ ಅನುಮತಿ ಇಲ್ಲದೆ ಕಂಪೆನಿಯಿಂದ ಉದ್ಯೋಗಿಗಳನ್ನು ವಜಾಗೊಳಿಸುವ ಮಿತಿಯನ್ನು 100ರಿಂದ 300ಕ್ಕೆ ಏರಿಸುವ ಮೂರು ಕಾರ್ಮಿಕ ವಿಧೇಯಕಗಳನ್ನು ಸಂಸತ್ತು ಬುಧವಾರ ಅಂಗೀಕರಿಸಿತ್ತು.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಮೂರು ವಿಧೇಯಕಗಳ ಮೂಲಕ ಕೇಂದ್ರ ಸರಕಾರ ಕಾರ್ಮಿಕ ವರ್ಗದ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ.

‘‘ಕೃಷಿಕರ ಬಳಿಕ ಈಗ ಕಾರ್ಮಿಕ ವರ್ಗದ ಮೇಲೆ ದಾಳಿ ಮಾಡಲಾಗಿದೆ. ಗೆಳೆಯರ ಲಾಭಕ್ಕಾಗಿ ಬಡವರನ್ನು ಶೋಷಿಸುವುದು ಮೋದಿಜಿ ಆಡಳಿತ’’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಸಂಸತ್ತು ಅಂಗೀಕರಿಸಿದ 3 ಕಾರ್ಮಿಕ ಮಸೂದೆಗಳ ವರದಿಯನ್ನು ಹಂಚಿಕೊಂಡಿದ್ದಾರೆ.

ಈ ವಿಧೇಯಕಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ಬಿಜೆಪಿ ಸರಕಾರದ ಆದ್ಯತೆ ಗಮನಿಸಿ. ಬಿಜೆಪಿ ಸರಕಾರ ಜಾರಿಗೆ ತಂದ ಕಾಯ್ದೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದನ್ನು ಸುಗಮಗೊಳಿಸಲಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News