ನೋಮ್ ಚೋಮ್ಸ್‌ಕಿ, ಆರುಂಧತಿ ರಾಯ್, ಸಹಿತ 200ಕ್ಕೂ ಅಧಿಕ ಚಿಂತಕ, ಸಾಹಿತಿಗಳಿಂದ ಉಮರ್ ಖಾಲಿದ್ ಬಿಡುಗಡೆಗೆ ಆಗ್ರಹ

Update: 2020-09-24 17:17 GMT

ಹೊಸದಿಲ್ಲಿ, ಸೆ.24: ದಿಲ್ಲಿ ಗಲಭೆಗೆ ಸಂಬಂಧಿಸಿ ಬಂಧಿತರಾಗಿರುವ ಜವಾಹರಲಾಲ್ ನೆಹರೂ ವಿವಿಯ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಬಿಡುಗಡೆಗೆ ಆಗ್ರಹಿಸಿ ನೋಮ್‌ ಚೋಮ್ಸ್‌ಕಿ, ಆರುಂಧತಿ ರಾಯ್, ಮೀರಾ ನಾಯರ್ ಸೇರಿದಂತೆ 200ಕ್ಕೂ ಅಧಿಕ ಶಿಕ್ಷಣ ತಜ್ಞರು, ಚಿತ್ರನಿರ್ದೇಶಕರು ಹಾಗೂ ಸಾಹಿತಿಗಳು ಗುರುವಾರ ಆಗ್ರಹಿಸಿದ್ದಾರೆ.

‘‘ಸಮಾನ ನಾಗರಿಕ ಹಕ್ಕುಗಳನ್ನು ನಿರಾಕರಿಸುವ ಸಿಎಎ-ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಸುಳ್ಳು ದೋಷಾರೋಪ ಹೊರಿಸಲ್ಪಟ್ಟು ಹಾಗೂ ಅನ್ಯಾಯವಾಗಿ ಜೈಲಿಗೆ ತಳ್ಳಲ್ಪಟ್ಟಿರುವ   ಉಮರ್ ಖಾಲಿದ್ ಮತ್ತಿತರರನ್ನು ಬಿಡುಗಡೆಗೊಳಿಸಬೇಕು ಹಾಗೂ ದಿಲ್ಲಿ ಗಲಭೆಯ ತನಿಖೆ ನಡೆಸುತ್ತಿರುವ ಪೊಲೀಸರು ಭಾರತದ ಸಂವಿಧಾನಕ್ಕೆ ಅನುಸಾರವಾಗಿ ನಿಷ್ಪಕ್ಷ ತನಿಖೆ ನಡೆಸುವುದನ್ನು ಖಾತರಿ ಪಡಿಸಬೇಕೆಂದು ಭಾರತ ಸರಕಾರಕ್ಕೆ ತಾವು ಕರೆ ನೀಡುತ್ತೇವೆ’’ ಎಂದು ಜಂಟಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಚೋಮ್ಸ್‌ಕಿ ಹಾಗೂ ನಾಯರ್ ಅವರಲ್ಲದೆ, ನಟ ರತ್ನ ಪಾಠಕ್ ಶಾ, ಸಾಹಿತಿಗಳಾದ ಅಮಿತಾವ್ ಘೋಷ್. ಸಲ್ಮಾನ್ ರಶ್ದಿ, ಆರುಂಧತಿ ರಾಯ್ ಹಾಗೂ ಪತ್ರಕರ್ತ ಪಿ. ಸಾಯಿನಾಥ್ ಜಂಟಿ ಹೇಳಿಕೆಗೆ ಸಹಿಹಾಕಿದ ಪ್ರಮುಖರು.

‘‘ದಿಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಕಪೋಲಕಲ್ಪಿತ ಆರೋಪದಲ್ಲಿ 2020ರ ಸೆಪ್ಟೆಂಬರ್ 14ರಂದು ಬಂಧಿತರಾದ ಯುವ ವಿದ್ವಾಂಸ ಹಾಗೂ ಹೋರಾಟಗಾರ ಉಮರ್‌ ಖಾಲಿದ್ ಜೊತೆ ನಾವು ಏಕತೆಯೊಂದಿಗೆ ಹಾಗೂ ರೋಷಾವೇಶದೊಂದಿಗೆ ನಿಂತುಕೊಳ್ಳುವೆವು’’ ಎಂದು ಹೇಳಿಕೆ ತಿಳಿಸಿದೆ.

ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಕೋಮುಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿ ಉಮರ್ ಖಾಲಿದ್ ಅವರನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯಡಿ ಸೆಪ್ಟೆಂಬರ್ 14ರಂದು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News