ಎಲ್ಗಾರ್ ಪರಿಷತ್ ಪ್ರಕರಣ: ಸುಧಾ ಭಾರದ್ವಾಜ್ ಜಾಮೀನು ಅರ್ಜಿ ಪರಿಶೀಲನೆಗೆ ಸುಪ್ರೀಂ ನಿರಾಕರಣೆ

Update: 2020-09-24 18:12 GMT

ಹೊಸದಿಲ್ಲಿ, ಸೆ. 24: ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿರುವ ಎಲ್ಗಾರ್ ಪರಿಷತ್-ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿರುವ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.

ಸುಧಾ ಭಾರದ್ವಾಜ್ ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಗಳಾದ ಯು.ಯು. ಲಲಿತ್ ಹಾಗೂ ಅಜಯ್ ರಸ್ತೋಗಿ ಅವರನ್ನು ಒಳಗೊಂಡ ನ್ಯಾಯಪೀಠ ತಿರಸ್ಕರಿಸಿದೆ.

  ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನ್ಯಾಯವಾದಿ ವೃಂದಾ ಗ್ರೋವರ್, ಸುಧಾ ಭಾರದ್ವಾಜ್ ಅವರು ಕಳೆದ ಎರಡು ವರ್ಷಗಳಿಂದ ಕಾರಾಗೃಹದಲ್ಲಿ ಇದ್ದಾರೆ. ದೂರುದಾರರಲ್ಲಿ ದೋಷಾರೋಪಣೆ ಸಾಮಗ್ರಿಗಳು ಯಾವುದೂ ಪತ್ತೆಯಾಗಿಲ್ಲ. ಅವರು ಮಧುಮೇಹ ಹಾಗೂ ಇತರ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಹಲವು ಪರೀಕ್ಷೆಗಳ ಅಗತ್ಯ ಇದೆ. ಆದುದರಿಂದ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು.

 ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಒಂದೋ ನೀವು ಈ ಮನವಿಯನ್ನು ಹಿಂದೆಗೆದುಕೊಳ್ಳಿ. ಇಲ್ಲದೇ ಇದ್ದರೆ, ಮನವಿಯನ್ನು ತಿರಸ್ಕರಿಸಲಾಗುವುದು ಎಂದು ಹೇಳಿತು. ಅಲ್ಲದೆ, ನಿಯಮಿತ ಜಾಮೀನಿಗೆ ಮನವಿ ಸಲ್ಲಿಸಿ ಎಂದು ಸೂಚಿಸಿತು.

ಈ ಹಿನ್ನೆಲೆಯಲ್ಲಿ ಸುಧಾ ಭಾರದ್ವಾಜ್ ಅವರು ಮನವಿಯನ್ನು ಹಿಂದೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News