ಉತ್ತರಪ್ರದೇಶ: ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ

Update: 2020-09-24 18:23 GMT

ಆಗ್ರಾ, ಸೆ. 24: ದಲಿತ ಸಮುದಾಯಕ್ಕೆ ಸೇರಿದ 19 ವರ್ಷದ ಯುವತಿಯ ಮೇಲೆ ಮೇಲ್ಜಾತಿಗೆ ಸೇರಿದ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಸೆಪ್ಟಂಬರ್ 14ರಂದು ನಡೆದಿದ್ದು, ತಡವಾಗಿ ವರದಿಯಾಗಿದೆ.

ಅತ್ಯಾಚಾರ ಎಸಗಿದ ಬಳಿಕ ಆರೋಪಿಗಳು ಯುವತಿಯ ಕುತ್ತಿಗೆ ಹಿಸುಕಿ ಹತ್ಯೆ ನಡೆಸಲು ಯತ್ನಿಸಿದ್ದಾರೆ. ಇದರಿಂದ ಯುವತಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೆಪ್ಟಂಬರ್ 22ರಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಯುವತಿ, ಸೆಪ್ಟಂಬರ್ 14ರಂದು ತಾನು ಕಟ್ಟಿಗೆ ಸಂಗ್ರಹಿಸಲು ತೆರಳುತ್ತಿದ್ದಾಗ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದಿದ್ದಾರೆ.

 ಕಳೆದ ವಾರ ಯುವತಿಯ ಸಹೋದರ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹತ್ಯೆ ಯತ್ನದ ಆರೋಪಿ ಎಂದು ಗುರುತಿಸಲಾದ ಸಂದೀಪ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಯುವತಿಯ ಹೇಳಿಕೆ ಬಳಿಕ ಪ್ರಥಮ ಮಾಹಿತಿ ವರದಿಯಲ್ಲಿ ಸಾಮೂಹಿಕ ಅತ್ಯಾಚಾರ ಆರೋಪವನ್ನು ಸೇರಿಸಲಾಗಿದೆ. ಹಾಗೂ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಥ್ರಾಸ್‌ನ ಪೊಲೀಸ್ ಅಧೀಕ್ಷಕ ವಿಕ್ರಾಂತ್ ವಿರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News