ಇಂದು ರೈತ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ, ಅಲ್ಲಲ್ಲಿ ರೈಲು,ರಸ್ತೆ ತಡೆ

Update: 2020-09-25 14:25 GMT

ಹೊಸದಿಲ್ಲಿ, ಸೆ.25: ಕೃಷಿ ಮಸೂದೆಯನ್ನು ವಿರೋಧಿಸಿ ಪಂಜಾಬ್, ಹರ್ಯಾಣ , ಮತ್ತು ಉತ್ತರಪ್ರದೇಶದ ಕೆಲವೆಡೆ ಶುಕ್ರವಾರ ಹೆದ್ದಾರಿ ಮತ್ತು ರೈಲ್ವೇ ಸಂಚಾರಕ್ಕೆ ತಡೆಯೊಡ್ಡಿ ರೈತರ ಬೃಹತ್ ಪ್ರತಿಭಟನೆ ನಡೆಯಿತು. ಮಸೂದೆಯನ್ನು ರದ್ದುಗೊಳಿಸದಿದ್ದರೆ ಪ್ರತಿಭಟನೆ ಇನ್ನಷ್ಟು ತೀವ್ರವಾಗಲಿದೆ ಎಂದು ರೈತರು ಎಚ್ಚರಿಸಿದ್ದಾರೆ. ಕಾಂಗ್ರೆಸ್, ಆರ್‌ಜೆಡಿ, ತೃಣಮೂಲ ಕಾಂಗ್ರೆಸ್ ಸಹಿತ ಹಲವು ಪ್ರತಿಪಕ್ಷಗಳು ಹಾಗೂ 10 ಕೇಂದ್ರ ಕಾರ್ಮಿಕ ಸಂಘಟನೆಗಳು ರೈತರಿಗೆ ಬೆಂಬಲ ಸೂಚಿಸಿವೆ. ಮಧ್ಯಪ್ರದೇಶ, ಬಿಹಾರ, ಕರ್ನಾಟಕದಲ್ಲೂ ರೈತರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ಪಂಜಾಬ್‌ನಲ್ಲಿ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ನೇತೃತ್ವದಲ್ಲಿ 31 ರೈತ ಸಂಘಟನೆಗಳು ನಡೆಸಿದ ಬೃಹತ್ ಪ್ರತಿಭಟನೆಯಿಂದ ರಾಜ್ಯದಲ್ಲಿ ಜನಜೀವನ ಮತ್ತು ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ರೈತರನ್ನು ಬೆಂಬಲಿಸುವ ಕಾರಣ ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕೆ ರೈತರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ. ಪಂಜಾಬ್-ಹರ್ಯಾಣ ಗಡಿಭಾಗವನ್ನು ಬಂದ್ ಮಾಡಲಾಗಿದ್ದು ಲೂಧಿಯಾನದ ಎನ್‌ಎಚ್-1 ಟೋಲ್ ಪ್ಲಾಝಾದ ಬಳಿ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದಾರೆ. ಬಿಕೆಯು ಹಾಗೂ ರೆವೊಲ್ಯುಷನರಿ ಮಾರ್ಕಿಸ್ಟ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ದಿಲ್ಲಿ-ಅಮೃತಸರ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರು. ಫರೀದ್‌ಕೋಟ್-ಕೊಟ್ಕಾಪುರ ಹೆದ್ದಾರಿಯಲ್ಲೂ ರೈತ ಸಂಘಗಳು ಪ್ರತಿಭಟನೆ ನಡೆಸಿದವು. ಅಮೃತಸರದಲ್ಲಿ ಗುರುವಾರ ಆರಂಭಗೊಂಡಿರುವ ರೈಲು ರೋಕೋ ಪ್ರತಿಭಟನೆ ಶನಿವಾರವೂ ಮುಂದುವರಿಯಲಿದೆ ಎಂದು ಕಿಸಾನ್ ಮಝ್ದೂರ್ ಸಂಘರ್ಷ ಸಮಿತಿ ಹೇಳಿದೆ. ಉತ್ತರಪ್ರದೇಶದ ನೋಯ್ಡಾದ ಸೆಕ್ಟರ್ 14ಎಯಲ್ಲಿ ದಿಲ್ಲಿ-ನೋಯ್ಡಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸುಮಾರು 200 ರೈತರು ರಸ್ತೆ ತಡೆ ನಡೆಸಿದ್ದು ಇಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಉತ್ತರಪ್ರದೇಶದಲ್ಲಿ ಮೀರತ್-ದಿಲ್ಲಿ ಮತ್ತು ಅಯೋಧ್ಯ-ಲಕ್ನೊ ಹೆದ್ದಾರಿಯಲ್ಲೂ ರಸ್ತೆ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಬಿಹಾರದಲ್ಲಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ನೇತೃತ್ವದಲ್ಲಿ ರೈತರಿಂದ ಟ್ರಾಕ್ಟರ್ ರ್ಯಾಲಿ ನಡೆಯಿತು. ಕರ್ನಾಟಕದಲ್ಲಿ ರಾಜ್ಯ ರೈತರ ಸಂಘದ ಆಶ್ರಯದಲ್ಲಿ ಬೊಮ್ಮನಹಳ್ಳಿ ಬಳಿಯ ಕರ್ನಾಟಕ-ತಮಿಳುನಾಡು ಹೆದ್ದಾರಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಸುಮಾರು 250 ರೈತರನ್ನು ಪೊಲೀಸರು ವಶಕ್ಕೆ ಪಡೆದರು. ತಮಿಳುನಾಡಿನ ತಿರುಚಿಯಲ್ಲಿ ರೈತ ಸಂಘದ ಆಶ್ರಯದಲ್ಲಿ ಪ್ರತಿಭಟನೆ ನಡೆದಿದ್ದು ರೈತರು ತಮ್ಮ ಕೈಗಳನ್ನು ಸರಪಳಿಯಿಂದ ಬಂಧಿಸಿಕೊಂಡು, ಹಗ್ಗದ ಕುಣಿಕೆಗೆ ತಲೆಯೊಡ್ಡುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಮಧ್ಯೆ, ಆನ್‌ಲೈನ್ ಮೂಲಕ ನಡೆದ ಬಿಜೆಪಿ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೃಷಿ ಮಸೂದೆಯಿಂದ ರೈತರಿಗೆ ಬಹಳ ಅನುಕೂಲವಾಗಲಿದೆ. ಆದರೆ ಪ್ರತಿಪಕ್ಷಗಳು ಈ ವಾಸ್ತವಾಂಶವನ್ನು ಮರೆಮಾಚಿ ಅಪಪ್ರಚಾರ ನಡೆಸುತ್ತಿವೆ ಎಂದು ಹೇಳಿದರು. ಮಸೂದೆಯ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ, ಹೊಸ ಕೃಷಿ ಮಸೂದೆಗಳು ರೈತರನ್ನು ಗುಲಾಮರನ್ನಾಗಿಸುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News