20,000 ಕೋ.ರೂ.ತೆರಿಗೆ ವಿವಾದ ಪ್ರಕರಣದಲ್ಲಿ ಸರಕಾರದ ವಿರುದ್ಧ ವೊಡಾಫೋನ್‌ಗೆ ಗೆಲುವು

Update: 2020-09-25 15:50 GMT

ಹೊಸದಿಲ್ಲಿ,ಸೆ.25: ಕೇಂದ್ರ ಸರಕಾರದೊಂದಿಗೆ 20,000 ಕೋ.ರೂ.ವಿವಾದಕ್ಕೆ ಸಂಬಂಧಿಸಿದಂತೆ ಹೇಗ್‌ನ ಅಂತರ್ ರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಧೀಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದ ದೂರಸಂಪರ್ಕ ಸಂಸ್ಥೆ ವೊಡಾಫೋನ್‌ಗೆ ಶುಕ್ರವಾರ ಮಹತ್ವದ ಗೆಲುವು ಲಭಿಸಿದೆ. ತನ್ನ ಮೇಲೆ 20,000 ಕೋ.ರೂ.ಗಳ ತೆರಿಗೆಯನ್ನು ಹೇರಿದ್ದು ಅನ್ಯಾಯ ಎಂದು ವೊಡಾಫೋನ್ ವಾದಿಸಿತ್ತು.

ಭಾರತ ಸರಕಾರವು ವೊಡಾಫೋನ್ ಮೇಲೆ ತೆರಿಗೆ ಬಾಧ್ಯತೆಯನ್ನು ಹೇರಿರುವುದು ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ಹೂಡಿಕೆ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ನ್ಯಾಯಾಧಿಕರಣವು ತನ್ನ ತೀರ್ಪಿನಲ್ಲಿ ಹೇಳಿದೆ.

ಕೇಂದ್ರ ಸರಕಾರವು ವೊಡಾಫೋನ್‌ನಿಂದ ತೆರಿಗೆ ಬಾಕಿಯನ್ನು ಕೇಳುವುದನ್ನು ನಿಲ್ಲಿಸಬೇಕು ಮತ್ತು ಕಾನೂನು ವೆಚ್ಚವಾಗಿ ಕಂಪನಿಗೆ 40 ಕೋ.ರೂ.ಗಳ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಧಿಕರಣವು ನಿರ್ದೇಶ ನೀಡಿದೆ.

ತೀರ್ಪಿನ ಕುರಿತು ವೊಡಾಫೋನ್ ಮತ್ತು ವಿತ್ತ ಸಚಿವಾಲಯ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

 12,000 ಕೋ.ರೂ.ಬಡ್ಡಿ ಮತ್ತು 7,900 ಕೋ.ರೂ.ದಂಡಗಳನ್ನು ಒಳಗೊಂಡ ಈ ತೆರಿಗೆ ವಿವಾದವು ವೊಡಾಫೋನ್ 2007ರಲ್ಲಿ ಹಚಿಸನ್ ವಾಂಪೋವಾದಿಂದ ಭಾರತದಲ್ಲಿಯ ಮೊಬೈಲ್ ಉದ್ಯಮವನ್ನು ಆಸ್ತಿ ಸಹಿತ ಖರೀದಿಸಿದಾಗಿನಿಂದ ಹುಟ್ಟಿಕೊಂಡಿತ್ತು. ಹಚಿಸನ್‌ನಿಂದ ಖರೀದಿಗಾಗಿ ವೊಡಾಫೋನ್ ತೆರಿಗೆ ಪಾವತಿಸಲು ಬದ್ಧವಾಗಿದೆ ಎಂದು ಸರಕಾರವು ಹೇಳಿತ್ತು.

2012ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ವೊಡಾಫೋನ್ ಪರವಾಗಿ ತೀರ್ಪು ನೀಡಿತ್ತಾದರೂ ಅದೇ ವರ್ಷ ನಿಯಮಾವಳಿಗಳನ್ನು ಬದಲಿಸಿದ್ದ ಸರಕಾರವು ತೆರಿಗೆಯನ್ನು ಪೂರ್ವಾನ್ವಯಗೊಳಿಸಿತ್ತು. ಎಪ್ರಿಲ್ 2014ರಲ್ಲಿ ವೊಡಾಫೋನ್ ಭಾರತದ ವಿರುದ್ಧ ಅಂತರ್ ರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಧಿಕರಣದ ಮೆಟ್ಟಿಲನ್ನೇರಿತ್ತು.

ಪೂರ್ವಾನ್ವಯಿತ ತೆರಿಗೆ ಮತ್ತು ಗುತ್ತಿಗೆಗಳ ರದ್ದತಿ ವಿವಾದಕ್ಕೆ ಸಂಬಂಧಿಸಿದಂತೆ ಕೇರ್ನ್ ಎನರ್ಜಿ ಸೇರಿದಂತೆ ಡಝನ್‌ಗೂ ಅಧಿಕ ಕಂಪನಿಗಳು ಭಾರತದ ವಿರುದ್ಧ ಹೇಗ್ ನ್ಯಾಯಾಧಿಕರಣದಲ್ಲಿ ಮಧ್ಯಸ್ಥಿಕೆ ಪ್ರಕರಣಗಳನ್ನು ದಾಖಲಿಸಿವೆ. ಸರಕಾರವು ಈ ಪ್ರಕರಣಗಳಲ್ಲಿ ಸೋತರೆ ಪರಿಹಾರವಾಗಿ ಈ ಕಂಪನಿಗಳಿಗೆ ಕೋಟ್ಯಂತರ ರೂ.ಗಳನ್ನು ಪಾವತಿಸಬೇಕಾಗಬಹುದು.

ಪ್ರತ್ಯೇಕ ಪ್ರಕರಣವೊಂದರಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ವೊಡಾಫೋನ್ ಐಡಿಯಾಗೆ ಸರ್ವೋಚ್ಚ ನ್ಯಾಯಾಲಯವು ಈ ತಿಂಗಳ ಪೂರ್ವಾರ್ಧದಲ್ಲಿ ಕೊಂಚ ನೆಮ್ಮದಿಯನ್ನು ನೀಡಿದೆ. ಸಾವಿರಾರು ಕೋಟಿ ರೂ.ಗಳ ಸರಕಾರಿ ಬಾಕಿಗಳನ್ನು ಪಾವತಿಸಲು ಅದು ಐಡಿಯಾ ಸೇರಿದಂತೆ ದೂರಸಂಪರ್ಕ ಕಂಪನಿಗಳಿಗೆ 10 ವರ್ಷಗಳ ಸಮಯಾವಕಾಶವನ್ನು ಒದಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News