ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ನಟಿ ದೀಪಿಕಾ ಪಡುಕೋಣೆ

Update: 2020-09-26 16:05 GMT

ಮುಂಬೈ, ಸೆ. 26: ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಮಾದಕ ದ್ರವ್ಯ ಆಯಾಮದ ತನಿಖೆ ನಡೆಸುತ್ತಿರುವ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ಅವರ ವಿಚಾರಣೆ ನಡೆಸಿದೆ. ನಟಿ ದೀಪಿಕಾ ಪಡುಕೋಣೆ ಅವರನ್ನು ಮುಂಬೈಯ ಕೊಲಬಾದಲ್ಲಿರುವ ಅವರ ಈವ್‌ಲೈನ್ ಅತಿಥಿ ಗೃಹದಲ್ಲಿ ಎನ್‌ಸಿಬಿ 6 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ನಟಿ ಸಾರಾ ಅಲಿ ಖಾನ್ ಹಾಗೂ ಶ್ರದ್ಧಾ ಕಪೂರ್ ಅವರನ್ನು ಎನ್‌ಸಿಬಿಯ ಬಲ್ಲಾರ್ಡ್ ಎಸ್ಟೇಟ್ ಕಚೇರಿಯಲ್ಲಿ ತನಿಖೆ ನಡೆಸಿದೆ. ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಅವರನ್ನು ಶುಕ್ರವಾರ ವಿಚಾರಣೆ ನಡೆಸಲಾಗಿತ್ತು. ಎರಡನೇ ದಿನವಾದ ಇಂದು ಕೂಡ ಕರೀಷ್ಮಾ ಪ್ರಕಾಶ್ ಅವರು ವಿಚಾರಣೆ ಎದುರಿಸಲು ಎನ್‌ಸಿಬಿ ಕಚೇರಿಗೆ ಆಗಮಿಸಿದ್ದರು. ನಟ ರಾಕುಲ್ ಪ್ರೀತ್ ಸಿಂಗ್ ಅವರ ವಿಚಾರಣೆಗೆ ನಾಲ್ಕು ಗಂಟೆ ತೆಗೆದುಕೊಂಡಿದೆ. ಅದಕ್ಕಿಂತಲೂ ಹೆಚ್ಚು ಕಾಲ ಕರೀಷ್ಮಾ ಪ್ರಕಾಶ್ ಅವರ ವಿಚಾರಣೆ ನಡೆಯಿತು. ಸೇವನೆಗೆ ಮರಿಜುವಾನ ತರುವುದನ್ನು ಸೂಚಿಸುತ್ತದೆ ಎಂದು ಹೇಳಲಾದ ವ್ಯಾಟ್ಸ್ ಆ್ಯಪ್ ಸಂದೇಶದ ಕುರಿತು ರಾಕುಲ್ ಪ್ರೀತ್ ಸಿಂಗ್ ಹಾಗೂ ಕರೀಷ್ಮಾ ಪ್ರಕಾಶ್ ಅವರನ್ನು ಎನ್‌ಸಿಬಿ ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News